ಅರಣ್ಯ ಇಲಾಖೆಯ ಕ್ರಮ ಖಂಡಿಸಿ ರೈತರ ಪ್ರತಿಭಟನೆ
ರಾಣೆಬೆನ್ನೂರ 05: ಸುಮಾರು 40 ವರ್ಷಗಳಿಂದ ಸರ್ಕಾರಿ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಹಿಡುವಳಿ ರೈತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ, ಸ್ಥಳೀಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೀಲದಹಳ್ಳಿ ಗ್ರಾಮದ ರೈತರು ಬಗರಹುಕುಂ ಕಾಯ್ದೆಯಡಿ ಸಾಗುವಳಿ ಮಾಡಿಕೊಂಡು, ತಮ್ಮ ಕಾನೂನುಬದ್ಧ ಹಕ್ಕಿನ ಚೌಕಟ್ಟಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸರ್ವೇ ನಂ. 50 ಮತ್ತು 60ರಲ್ಲಿ ಈ ಹಿಂದೆ ಸಾಗುವಳಿ ಮಾಡಿದ್ದ ರೈತರು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಕಳೆದ 2-3 ವರ್ಷಗಳಿಂದ ಬರಗಾಲದ ಛಾಯೆ ಆವರಿಸಿದ್ದರಿಂದ ಯಾರೂ ಬಿತ್ತನೆ ಮಾಡಿರಲಿಲ್ಲ. ಜಮೀನು ಪಾಳು ಬಿದ್ದಿದ್ದರಿಂದ ಅಲ್ಲಿ ಗಿಡಗಂಟೆಗಳು ಬೆಳೆದು ಸಾಕಷ್ಟು ಸಮಸ್ಯೆ ಉಂಟಾಗಿದೆ. ಹೀಗಾಗಿ ಜಾಗವನ್ನು ಸ್ವಚ್ಛಗೊಳಿಸಿ ಉಳಿಮೆ ಮಾಡಲು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಿಜವಾದ ಫಲಾನುಭವಿಗಳಿಗೆ ಸರ್ವೇ ನಡೆಸಿ ಹಕ್ಕುಪತ್ರ ನೀಡಬೇಕು.