ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ಡಾ. ಸರಜೂ ಕಾಟ್ಕರ್ ಅವರಿಗೆ ಸನ್ಮಾನ
ಬೆಳಗಾವಿ 23: ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಶ್ರದ್ಧೆ ಮತ್ತು ನಿರಂತರ ಪರಿಶ್ರಮ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು. ನಗರದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿದ್ದ "ಬೆಳ್ಳಿ ಬೆಡಗು" ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಶ್ರದ್ಧೆ, ಪರಿಶ್ರಮ ಮತ್ತು ಸಮಯಪ್ರಜ್ಞೆಯಿಂದ ನಿರ್ವಹಿಸಿದಾಗ ಯಶಸ್ಸು ಗಳಿಸಲು ಸಾಧ್ಯ. ಶಿಸ್ತು ಜೀವನಕ್ಕೆ ಸರಿಯಾದ ದಿಕ್ಕು ನೀಡಿದರೆ, ಶ್ರದ್ಧೆ ಗುರಿ ತಲುಪಲು ಪ್ರೇರಣೆ ನೀಡುತ್ತದೆ. ಸೋಲು ಎದುರಾದಾಗ ನಿರಾಶರಾಗದೆ, ಅದನ್ನು ಅನುಭವವಾಗಿ ಸ್ವೀಕರಿಸಿ ಮುಂದಿನ ಪ್ರಯತ್ನಗಳಿಗೆ ಸಿದ್ಧರಾಗಬೇಕು. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಮತ್ತು ಸಾಧಿಸುವ ಸಾಮರ್ಥ್ಯವಿದ್ದು, ಅದನ್ನು ಗುರುತಿಸಿ ಸೂಕ್ತ ದಿಕ್ಕಿನಲ್ಲಿ ಮುನ್ನಡೆದರೆ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಕೇವಲ ಪ್ರತಿಭೆ ಸಾಕಾಗುವುದಿಲ್ಲ. ಶಿಸ್ತು, ಶ್ರದ್ಧೆ, ಪರಿಶ್ರಮ ಹಾಗೂ ನಿರಂತರ ಕಲಿಕೆಯ ಮನೋಭಾವವೂ ಅಗತ್ಯ. ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜಕ್ಕೂ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಸುನೀತಾ ಸೊಲ್ಲಾಪುರೆ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ವಿದ್ಯಾ ಹುಂಡೇಕರ ಸ್ವಾಗತಿಸಿದರು. ಡಾ. ಭಾರತಿ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವಿ ಅಜ್ವಾನ ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು. ಡಾ. ನಿರ್ಮಲಾ ಬಟ್ಟಲ ಹಾಗೂ ಸರ್ವಮಂಗಳಾ ಅರಳಿಮಟ್ಟಿ ಅವರು ಡಾ. ಸರಜೂ ಕಾಟಕರ ಅವರ ಕವನಗಳನ್ನು ವಾಚಿಸಿದರು. ಆಶಾ ಯಮಕನಮರಡಿ ಹಾಗೂ ಆಶಾ ಸಂಸುದ್ದಿ ಕವನ ಗಾಯನ ಮಾಡಿದರು. ಸುಮಾ ಕಾಟಕರ, ಸಂಘದ ಮಾಜಿ ಅಧ್ಯಕ್ಷರಾದ ನೀಲಗಂಗಾ ಚರಂತಿಮಠ, ಸುಮಾ ಕಿತ್ತೂರ, ಸುನಂದಾ ಎಮ್ಮಿ, ಜ್ಯೋತಿ ಬದಾಮಿ ಹಾಗೂ ನೂತನ ಕುಲಕರ್ಣಿ ನಿರೂಪಿಸಿ, ವಂದಿಸಿದರು.