ಮುಂಡಗೋಡಿನಲ್ಲಿ ಪ್ರಥಮ ಬಾರಿಗೆ ದುರ್ಗಾ ದೌಡ್ ಯಶಸ್ವಿ; ಭಕ್ತಿ-ಒಗ್ಗಟ್ಟಿಗೆ ಸಾಕ್ಷಿಯಾದ ಒಂಬತ್ತು ದಿನ
ಮುಂಡಗೋಡ 23: ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ’ದುರ್ಗಾ ದೌಡ್’ ಕಾರ್ಯಕ್ರಮವು ಒಂಬತ್ತು ದಿನಗಳ ಕಾಲ ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ವಾತಾವರಣ ಮೂಡಿಸಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಕೊನೆಯ ದಿನ ನಡೆದ ವೈಭವದ ದುರ್ಗಾ ಆರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.ಕಳೆದ 2-3 ವರ್ಷಗಳಿಂದ ಇದ್ದ ಆಶಯದಂತೆ ಸಮಾನಮನಸ್ಕರು ಒಗ್ಗೂಡಿ ಸಮಿತಿ ರಚಿಸಿ, ಹಳಿಯಾಳ ದುರ್ಗಾ ದೌಡ್ ಸಮಿತಿಯ ಮಾರ್ಗದರ್ಶನ ಪಡೆದು ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಿದ್ದರು. ವೇದಮೂರ್ತಿ ಶ್ರೀ ರುದ್ರಮುನಿ ಸ್ವಾಮೀಜಿಯವರ ಪವಿತ್ರ ಹಸ್ತದಿಂದ ಚಾಲನೆ ಪಡೆದಿದ್ದ ಈ ಅಭಿಯಾನದಲ್ಲಿ ಮಹಿಳೆಯರು, ಯುವಕರು ಹಾಗೂ ಮಕ್ಕಳು ನಿರಂತರವಾಗಿ ಭಾಗವಹಿಸಿದ್ದರು.ಹಬ್ಬದ ಕಳೆಯಿಂದ ಕಂಗೊಳಿಸಿದ ಓಣಿಗಳು:ದುರ್ಗಾ ದೌಡ್ ಅಂಗವಾಗಿ ಪಟ್ಟಣದ ವಿವಿಧ ಓಣಿಗಳು ರಂಗೋಲಿ, ತೋರಣ ಹಾಗೂ ಹೂವಿನ ಅಲಂಕಾರದಿಂದ ಶೃಂಗಾರಗೊಂಡಿದ್ದವು. ಸಾಂಸ್ಕೃತಿಕ ಬಳಗ, ಸೇವಿಕಾ ಸಮಿತಿ, ದುರ್ಗಾ ಜಾಂಜ್, ದುಂದುಭಿ-ಚಂಡಿ ವಾದ್ಯಗಳ ತಂಡಗಳು, ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಳು, ಪೊಲೀಸ್ ಇಲಾಖೆ ಹಾಗೂ ಪತ್ರಿಕಾ ರಂಗ ಸಂಪೂರ್ಣ ಸಹಕಾರ ನೀಡಿದವು.ಸಮಸ್ತ ಜನತೆಯ ಸಹಕಾರವೇ ಶಕ್ತಿ:ಒಂಬತ್ತು ದಿನಗಳ ಸಂಭ್ರಮಕ್ಕೆ ತೆರೆ, ಓಣಿಗಳಲ್ಲಿ ರಂಗೋಲಿ, ತೋರಣಗಳ ಅಲಂಕಾರ, ಜನರ ಸಹಕಾರಕ್ಕೆ ಸಮಿತಿಯಿಂದ ಕೃತಜ್ಞತೆ ಈ ಯಶಸ್ಸು ಮುಂಡಗೋಡಿನ ಸಮಸ್ತ ಜನತೆಯ ಒಗ್ಗಟ್ಟಿನ ಫಲ ಎಂದು ದುರ್ಗಾ ದೌಡ್ ಸಮಿತಿಯ ಪ್ರಮುಖರಾದ ಮಂಜುನಾಥ್ ಹರಮಲಕರ್, ಶ್ರೀಧರ್ ಉಪ್ಪಾರ್, ಗಣೇಶ್ ಶಿರಾಲಿ, ಕಿರಣ್ ಕೊಲ್ಲಾಪುರ ಹಾಗೂ ಚಿದಾನಂದ ಬಡಿಗೇರ್ ತಿಳಿಸಿದ್ದು, ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.