ವಿಜಯಪುರ

ತಪ್ಪಿದ ಅನಾಹುತ, ಚಾಲಕನ ಸಮಯ ಪ್ರಜ್ಞೆಗೆ ಸಾಕ್ಷಿ

ತಪ್ಪಿದ ಅನಾಹುತ, ಚಾಲಕನ ಸಮಯ ಪ್ರಜ್ಞೆಗೆ ಸಾಕ್ಷಿ


ದೇವರ ಹಿಪ್ಪರಗಿ 11:  ದೇವರ ಹಿಪ್ಪರಗಿ ಮೂಲಕ ಕೂಡಗಿಯಿಂದ ಮಳಖೇಡದ ರಾಜಶ್ರೀ ಸಿಮೆಂಟ್ ಫ್ಯಾಕ್ಟರಿಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಬಲ್ಕರ್ ವಾಹನವೊಂದರ ಸ್ಟೀರಿಂಗ್ ಇದ್ದಕ್ಕಿದ್ದಂತೆ ಲಾಕ್ ಆದರೂ, ಚಾಲಕನ ಅತ್ಯಂತ ಚಾಣಾಕ್ಷತೆ ಹಾಗೂ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ಅಪಾಯವೊಂದು ತಪ್ಪಿದೆ. 

ಅಶೋಕ್ ಲೇಲ್ಯಾಂಡ್ ಬಲ್ಕರ್ ಟ್ಯಾಂಕರ್ (ರಾಠೋಡ್ ರೋಡ್ಲೈನ್ಸ್‌) ಕೂಡಗಿಯಿಂದ ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆ ಕಡೆಗೆ ಪ್ರಯಾಣಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 50 ರ ಮಾರ್ಗವಾಗಿ ಪಟ್ಟಣದ ಪ್ರಮುಖ ಕೇಂದ್ರವಾದ ಮೊಹರೆ ಹನುಮಂತರಾಯ ವೃತ್ತದ ಬಳಿ ತಲುಪುತ್ತಿದ್ದಂತೆ ವಾಹನದ ಸ್ಟೀರಿಂಗ್ ಇದ್ದಕ್ಕಿದ್ದಂತೆ ಲಾಕ್ ಆಗಿದೆ. 

 ಈ ಹಠಾತ್ ತಾಂತ್ರಿಕ ದೋಷದಿಂದ ವಾಹನ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪಿತಾದರೂ, ಚಾಲಕ ಬಾಲಚಂದ್ರ ರಾಠೋಡ್ ತಕ್ಷಣವೇ ಜಾಗರೂಕರಾಗಿ ವಾಹನವನ್ನು ಸಕಾಲದಲ್ಲಿ ನಿಯಂತ್ರಿಸಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಇದರಿಂದಾಗಿ ಜನನಿಬಿಡ ವೃತ್ತದಲ್ಲಿದ್ದ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರು ಅಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪರೀಶೀಲನೆ ನಡೆಸಿ ವೃತ್ತದಲ್ಲಿ ಯಾವುದೇ ಸಂಚಾರ ದಟ್ಟಣೆ ಉಂಟಾಗದಂತೆ ವಾಹನ ಸಂಚಾರವನ್ನು ಸುಗಮಗೊಳಿಸಿದರು.   ಚಾಲಕ ಬಾಲಚಂದ್ರ ರಾಠೋಡ್ ಅವರ ಚಾಣಾಕ್ಷ ನಿರ್ಧಾರ ಹಾಗೂ ಸಮಯಪ್ರಜ್ಞೆಗೆ ಹಾಗೂ ಪೇದೆ ವಿಜಯಕುಮಾರ ಅವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಕಾರಣ ಸ್ಥಳೀಯರು ಮತ್ತು ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ