ಜೆಡಿಎಸ್ ಕಚೇರಿಯಲ್ಲಿ ಜಯಪ್ರಕಾಶ ನಾರಾಯಣ ಅವರ 124ನೇ ಜಯಂತಿ ಆಚರಣೆ
ವಿಜಯಪುರ 11: ನಗರದ ಜನತಾದಳ (ಜಾತ್ಯತೀತ) ಪಕ್ಷದ ಕಚೇರಿಯಲ್ಲಿ ಭಾನುವಾರ ಜಯಪ್ರಕಾಶ ನಾರಾಯಣ ಅವರ 124ನೇ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ರೈತ ನಾಯಕ ಪಂಚಪ್ಪಣ್ಣ ಕಲಬುರಗಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಖಾದ್ರಿ ಇನಾಮದಾರ್ ಮಾತನಾಡಿ, ಜಯಪ್ರಕಾಶ ನಾರಾಯಣ ಅವರು ದೇಶ ಕಂಡ ಮಹಾನ್ ಜನನಾಯಕ, ದೇಶಪ್ರೇಮಿ ಹಾಗೂ ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಸ್ಮರಿಸಿದರು.
ಜನರು ಪ್ರೀತಿಯಿಂದ ‘ಜೆ.ಪಿ.’ ಹಾಗೂ ‘ಲೋಕನಾಯಕ’ ಎಂದು ಕರೆಯುತ್ತಿದ್ದ ಜಯಪ್ರಕಾಶ ನಾರಾಯಣ ಅವರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮಹಾತ್ಮ ಗಾಂಧಿ ಹಾಗೂ ಎಂ.ಎನ್. ರಾಯ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು, ಗಾಂಧೀಜಿಯವರ ತತ್ವಾದರ್ಶಗಳ ಹಾದಿಯಲ್ಲಿ ಸಾಗಿ ಸಮಾಜಸೇವೆ ಮತ್ತು ಜನಪರ ಹೋರಾಟಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
1970ರ ದಶಕದಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಜನಾಂದೋಲನಕ್ಕೆ ನಾಯಕತ್ವ ವಹಿಸಿ, ‘ಸಂಪೂರ್ಣ ಕ್ರಾಂತಿ’ಯ ಮೂಲಕ ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಗೆ ಕರೆ ನೀಡಿದ್ದರು. ಅವರ ಅಪಾರ ಸಮಾಜಸೇವೆ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ,
1965ರಲ್ಲಿ ಸಾರ್ವಜನಿಕ ಸೇವೆಗಾಗಿ ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತ್ತು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಜು ಹಿಪ್ಪರಗಿ, ವಿಜಯಪುರ ನಗರ ಅಧ್ಯಕ್ಷ ಪ್ರಶಾಂತ ಎಸ್. ಕಿಣಗಿ, ಸಂಜೀವ ಹಿರೇಮಠ, ಮುತ್ತುರಾಜ ಜಂಗಮಶೆಟ್ಟಿ, ಮಲ್ಲು ತೋರವಿ, ಸಿದ್ದನಗೌಡ ಪಾಟೀಲ, ದುರ್ಗದ್ ವಕೀಲರು, ರಾಜು ರಜಪೂತ್, ಎಸ್.ಎ. ಕಿಣಗಿ, ಪರಶುರಾಮ ರೋಣಿಹಾಳ್, ಬಾಬು ಶಿರಂಗಾರ್ ಹಾಗೂ ಎಸ್.ವೈ. ನಡುವಿನಕೇರಿ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.