ಯುವಜನರಲ್ಲಿ ನಾಯಕತ್ವ ಬೆಳೆಸಲು ಯುವ ಸಂಸತ್ ಸಹಕಾರಿ: ಸಂತೋಷ ಮ್ಯಾಗೇರಿ
ಕೊಲ್ಹಾರ 09 : ಯುವ ಜನತೆಯಲ್ಲಿ ನಾಯಕತ್ವ ಗುಣ ಬೆಳೆಸಲು ಮತ್ತು ಸಂಸದೀಯ ಕಲಾಪಗಳ ಅರಿವು ಮೂಡಿಸಲು ಯುವ ಸಂಸತ್ ಕಾರ್ಯಕ್ರಮ ಅತ್ಯಂತ ಸಹಕಾರಿ ಎಂದು ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಸಂತೋಷ ಮ್ಯಾಗೇರಿ ಹೇಳಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಲಾಗಿದ್ದ ’ತಾಲ್ಲೂಕು ಮಟ್ಟದ ಯುವ ಸಂಸತ್ತು 2026-27’ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ ಮದ್ದೀನ ಪ್ರಾಸ್ತಾವಿಕವಾಗಿ ಮಾತನಾಡಿ, "ಇಂದಿನ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಈ ಯುವ ಸಂಸತ್ ಕಾರ್ಯಕ್ರಮವು ನೈಜ ಸಂಸತ್ತಿನ ಪರಿಚಯ ಮಾಡಿಕೊಡುವುದಲ್ಲದೆ, ನಾಯಕತ್ವದ ಗುಣಗಳನ್ನು ಮತ್ತು ಉತ್ತಮ ಆಡಳಿತ ಕ್ರಮಗಳನ್ನು ಕಲಿಯಲು ವೇದಿಕೆಯಾಗಿದೆ," ಎಂದರು. ಕಾರ್ಯಕ್ರಮದಲ್ಲಿ ಸಿ.ಎಚ್. ಗೌಡರ ಅವರು ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ದಸ್ತಗೀರ ಕಲಾದಗಿ ಹಾಗೂ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ ಶುಭಾಶಯ ಕೋರಿ ಮಾತನಾಡಿದರು.