ಬಾಗಲಕೋಟೆ

ಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇಷ್ಠರು: ಧರೆಪ್ಪ ಸಾಂಗ್ಲೀಕರ

ಸಮಾಜದ ಓರೆಕೋರೆಗಳನ್ನು ತಿದ್ದುವ ವರದಿಗಾರರು ಶ್ರೇಷ್ಠರು: ಧರೆಪ್ಪ ಸಾಂಗ್ಲೀಕರ

ಲೋಕದರ್ಶನ ವರದಿ 

ರನ್ನ ಬೆಳಗಲಿ: ಅ. 10: ಸಮಾಜದ ಓರೆಕೋರೆಗಳನ್ನು ತಿದ್ದಿ, ತಪ್ಪುಗಳನ್ನು ಎತ್ತಿತೋರಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿ ಪತ್ರಿಕಾ ಮಾಧ್ಯಮಕ್ಕಿದೆ. ಈ ನಿಟ್ಟಿನಲ್ಲಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ನಿಜಕ್ಕೂ ಶ್ರೇಷ್ಠರು. ಅಂತಹ ಪತ್ರಕರ್ತರನ್ನು ಸಮಾಜ ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ ಹೇಳಿದರು. 

ಪಟ್ಟಣದ ಹಿರಿಯ ಪತ್ರಕರ್ತ ಕೆ. ಬಿ. ಕುಂಬಾಳಿ ಅವರು  ದಿನಪತ್ರಿಕೆಯ ವರದಿಗಾರರಾಗಿ ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ, ಶನಿವಾರ ಪಟ್ಟಣದ ಬಂದಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಂಕೇತಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪತ್ರಿಕಾ ರಂಗವು ತನ್ನ ವೃತ್ತಿಪರ ಶುದ್ಧತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡರೆ ದೇಶದಲ್ಲಿನ ಭ್ರಷ್ಟಾಚಾರವನ್ನು ತೊಲಗಿಸಲು ಮಹತ್ವದ ಕೊಡುಗೆ ನೀಡಬಹುದು. ಆದರೆ ಪತ್ರಕರ್ತರು ಹಣದ ಆಮಿಷಕ್ಕೆ ಒಳಗಾಗಿ ಬ್ಲ್ಯಾಕ್‌ಮೇಲ್‌ನಂತಹ ಪ್ರವೃತ್ತಿಗಳಿಗೆ ಬಲಿಯಾದರೆ ಪತ್ರಿಕಾ ರಂಗದ ಘನತೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು. 

ಪತ್ರಿಕಾ ರಂಗವು ಕೇವಲ ಲಾಭ ಗಳಿಸುವ ಕ್ಷೇತ್ರವಲ್ಲ; ಅದು ದೇಶ ಮತ್ತು ಸಮಾಜದ ಸೇವೆಗೆ ಮೀಸಲಾದ ಮಹತ್ವದ ವಲಯವಾಗಿದೆ. ಹೀಗಾಗಿ ಆರ್ಥಿಕವಾಗಿ ಸಬಲರಾಗಿರುವ ನಾಗರಿಕರು ಹಬ್ಬ-ಹರಿದಿನ, ಹುಟ್ಟುಹಬ್ಬ ಸೇರಿದಂತೆ ವಿವಿಧ ಶುಭ ಸಂದರ್ಭಗಳಲ್ಲಿ ಪತ್ರಿಕೆಗಳಿಗೆ ಜಾಹೀರಾತು ನೀಡುವ ಮೂಲಕ ಪತ್ರಿಕಾ ರಂಗದ ಬೆಳವಣಿಗೆಗೆ ಸಹಕರಿಸಬೇಕು. ಇದರಿಂದ ಪತ್ರಿಕೆಗಳು ಅಭಿವೃದ್ಧಿ ಹೊಂದುವುದರ ಜೊತೆಗೆ ಸಮಾಜಮುಖಿ ಪತ್ರಿಕೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತದೆ ಎಂದು ಹೇಳಿ, ನೂತನ ವರದಿಗಾರರಿಗೆ ಶುಭ ಹಾರೈಸಿದರು. 


ಸುದ್ದಿ ಓದಿ