ಅಕ್ರಮವಾಗಿ ಸಾಗಿಸುತ್ತಿದ್ದ 33.83 ಟನ್ ಅಕ್ಕಿ ಜಪ್ತಿ: ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ಸಾಗಾಟ; ಇಬ್ಬರು ಲಾರಿ ಚಾಲಕರ ಬಂಧನ
ಕೊಲ್ಹಾರ: ಸರ್ಕಾರದ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದ್ದ ಅಕ್ಕಿಯನ್ನು ಯಾವುದೇ ಅನುಮತಿ ಇಲ್ಲದೆ ರಾಯಚೂರಿನಿಂದ ಮಹಾರಾಷ್ಟ್ರದತ್ತ ಸಾಗಿಸುತ್ತಿದ್ದ ಲಾರಿಯನ್ನು ಕೂಡಗಿ ಎನ್‌ಟಿಪಿಸಿ ಪೊಲೀಸರು ಜಪ್ತಿ ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿ-50ರ ಕೂಡಗಿ ಕ್ರಾಸ್‌ನಲ್ಲಿ ಮಂಗಳವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಸೇಲಂ ಜಿಲ್ಲೆಯ ಶಂಕರಿ ತಾಲೂಕಿನ ಕುಳ್ಳಮಪಟ್ಟಿಯ ಕುಮಾರ ಎಂ. ಮುನಿಯಪ್ಪನ್ (47) ಹಾಗೂ ಸೇಲಂ ಜಿಲ್ಲೆಯ ಸೇಲನಮಕನಪಟ್ಟಿ ತಾಲೂಕಿನ ತಲಮಲೈನಗರದ ಬಾಲಾಜಿ ಡಿ. ದುರೈರಾಜಾ (35) ಅವರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೊತ್ನಾಳದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್‌ನಿಂದ ಸರ್ಕಾರದ ವಿವಿಧ ಯೋಜನೆಗಳಿಗೆ ಹಂಚಿಕೆಯಾಗಿದ್ದ ಅಕ್ಕಿಯನ್ನು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಪಡೆದು, ಮಹಾರಾಷ್ಟ್ರದ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು. ಈ ವೇಳೆ ಕೂಡಗಿ ಕ್ರಾಸ್‌ನಲ್ಲಿ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.
ಲಾರಿಯಲ್ಲಿ 685 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 33,830 ಕೆ.ಜಿ. ಅಕ್ಕಿ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹9,81,070 ಎಂದು ತಿಳಿಸಲಾಗಿದೆ. ಅಕ್ಕಿಯನ್ನು ವಶಪಡಿಸಿಕೊಂಡು ಬಸವನ ಬಾಗೇವಾಡಿ ಆಹಾರ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಕ್ಕಿ ಸಾಗಾಟಕ್ಕೆ ಬಳಸಿದ್ದ ಲಾರಿಯನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕುರಿತು ಕೊಲ್ಹಾರ ಆಹಾರ ನಿರೀಕ್ಷಕ ಎಂ.ಎಸ್. ಗುತ್ತರಗಿ ಅವರು ಕೂಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೋಟೊ: 07ಕೆಎಲ್ಆರ್01 ಕೂಡಗಿ ಕ್ರಾಸ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 33.83 ಟನ್ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ ಲಾರಿಯನ್ನು ಕೂಡಗಿ ಎನ್‌ಟಿಪಿಸಿ ಪೊಲೀಸರು ಜಪ್ತಿ ಮಾಡಿದ್ದಾರೆ.