ತೆಲಂಗಾಣದಲ್ಲಿ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಸಾವು; ನಾಲ್ಕು ವರ್ಷದ ಬಾಲಕಿ ಗಾಯ
ಹೈದರಾಬಾದ್, ಅ. 7: ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ–ಶಂಕರಪಳ್ಳಿ ಮುಖ್ಯ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ನಾಲ್ಕು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.
ಗೊಲ್ಲಪಲ್ಲಿ ಸ್ಟೇಜ್ ಬಳಿ ಅಪರಿಚಿತ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮೊಯಿನಾಬಾದ್ ಮಂಡಲದ ಮೆಡಿಪಲ್ಲಿ ಗ್ರಾಮದ ನಿವಾಸಿಗಳಾದ ಕಮ್ಮರಿ ಮಧುಸೂದನ್ (35), ಅವರ ಪತ್ನಿ ಸಾವಿತ್ರಿ (30) ಹಾಗೂ ಪುತ್ರ ಧನುಷ್ (6) ಎಂದು ಗುರುತಿಸಲಾಗಿದೆ.
ಕುಟುಂಬವು ಚಾನ್ವೆಲ್ಲಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಮಧುಸೂದನ್, ಸಾವಿತ್ರಿ ಹಾಗೂ ಧನುಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ನಾಲ್ಕು ವರ್ಷದ ಪುತ್ರಿ ಅಕ್ಷಯಾ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ಅಪರಿಚಿತ ವಾಹನ ಹಾಗೂ ಅದರ ಚಾಲಕನ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.