ಕಾರವಾರ

ನೌಕಾಪಡೆಯಿಂದ ಆರೋಗ್ಯ, ಶಿಕ್ಷಣ ಮತ್ತು ಸ್ವಚ್ಛತೆಗೆ ಒತ್ತು

ನೌಕಾಪಡೆಯಿಂದ ಆರೋಗ್ಯ, ಶಿಕ್ಷಣ ಮತ್ತು ಸ್ವಚ್ಛತೆಗೆ ಒತ್ತು

ಲೋಕದರ್ಶನ ವರದಿ 

  ಕಾರವಾರ 07:- ಭಾರತೀಯ ನೌಕಾಪಡೆಯ ಕಾರವಾರ ನೌಕಾ ಡಾಕ್‌ಯಾರ್ಡ್‌ ವತಿಯಿಂದ ನಾಗರಿಕಹಿಸೇನಾ ಸಹಭಾಗಿತ್ವ ಕಾರ್ಯಕ್ರಮದ ಅಂಗವಾಗಿ ಬೇಲೇಕೇರಿ ಗ್ರಾಮದಲ್ಲಿ ವಿವಿಧ ಜನಪರ ಹಾಗೂ ಕಲ್ಯಾಣ ಚಟುವಟಿಕೆಗಳನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದಲ್ಲಿ ಎರಡು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ಒಟ್ಟು 120 ಮಂದಿ ಶಿಬಿರದ ಪ್ರಯೋಜನ ಪಡೆದರು. ವೈದ್ಯಕೀಯ ತಪಾಸಣೆ ಹಾಗೂ ಮೂಲ ಆರೋಗ್ಯ ಸೇವೆಯೊಂದಿಗೆ ಸಾಮಾನ್ಯ ಸ್ವಚ್ಛತೆ ಮತ್ತು ರೋಗಗಳ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಯಿತು. 

ಖಾರ್ವಿವಾಡ ಸರ್ಕಾರಿ ಪ್ರಾಥಮಿಕ ಶಾಲೆಯ 150 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿ, ಶಾಲೆಯಲ್ಲಿ ಮರಗೆಲಸ ದುರಸ್ತಿ ಸೇರಿದಂತೆ ವಿವಿಧ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸಲಾಯಿತು. ವಿದ್ಯಾರ್ಥಿಗಳ ಅನುಕೂಲ ಹಾಗೂ ಶಾಲೆಯ ಸ್ವಚ್ಛತೆ ಹೆಚ್ಚಿಸುವ ಉದ್ದೇಶದಿಂದ ಶೆಡ್ ನಿರ್ಮಾಣ ಕಾರ್ಯವನ್ನೂ ಕೈಗೊಳ್ಳಲಾಯಿತು. ಗ್ರಾಮದಲ್ಲಿ ಕತ್ತಲಿನಿಂದಾಗಿ ಸಮಸ್ಯೆಯಾಗಬಹುದಾದ ಸ್ಥಳಗಳನ್ನು ಗುರುತಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಯಿತು.

ಸ್ಥಳೀಯ ಸಮುದಾಯಗಳ ಕಲ್ಯಾಣ ಹಾಗೂ ಅಭಿವೃದ್ಧಿಗೆ ಭಾರತೀಯ ನೌಕಾಪಡೆ ಕೈಗೊಂಡಿರುವ ನಿರಂತರ ಬದ್ಧತೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.  ನೌಕಾಪಡೆಯು ತನ್ನ ಸುತ್ತಮುತ್ತಲಿನ ಗ್ರಾಮಗಳ ಜನರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಆರೋಗ್ಯ, ಶಿಕ್ಷಣ, ಸ್ವಚ್ಛತೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮುಂದುವರಿಸಿದೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ