ಹೊಸಪೇಟೆ

ಸ್ಥಳೀಯ ಉದ್ಯೋಗ ಕಲ್ಪಿಸಿ, ವಲಸೆ ತಡೆಯಲು ಕ್ರಮ: ಡಾ. ಜಿ. ಪರಮೇಶ್ವರ

ಸ್ಥಳೀಯ ಉದ್ಯೋಗ ಕಲ್ಪಿಸಿ, ವಲಸೆ ತಡೆಯಲು ಕ್ರಮ: ಡಾ. ಜಿ. ಪರಮೇಶ್ವರ


          ಹೊಸಪೇಟೆ, ಅ.7: ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಊರು ತೊರೆದು ಬೇರೆಡೆ ವಲಸೆ ಹೋಗದಂತೆ, ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಿ ಜೀವನೋಪಾಯಕ್ಕೆ ಭದ್ರತೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.  

         ಹೊಸಪೇಟೆ ತಾಲ್ಲೂಕಿನ ತಾಳೆ ಬಸಾಪುರ ತಾಂಡಾದ ಕೆರೆಯಲ್ಲಿ ವಿಬಿಜಿ ರಾಮ್ಜಿ ಯೋಜನೆಯಡಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದ ಅವರು, ಲಂಬಾಣಿ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಯಾರೂ ಊರು ತೊರೆದು ವಲಸೆ ಹೋಗಬಾರದು. ಇಲ್ಲಿಯೇ ಉದ್ಯೋಗ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.  

       ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆ ಎದುರಾಗಿದ್ದು, ಕಬ್ಬು ಕಟಾವು, ಕಾಫಿ ತೋಟ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಜನರು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ವಿಬಿಜಿ ರಾಮ್ಜಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.  

ಕೂಲಿ ಪಾವತಿ ವಿಳಂಬವಾಗದಿರಲಿ  

ವಿಬಿಜಿ ರಾಮ್ಜಿ ಕಾಮಗಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೂಲಿ ಹಣ ಸಕಾಲಕ್ಕೆ ತಲುಪುತ್ತಿಲ್ಲ ಎಂಬ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಡಿಸಿಎಂ, ಕೆಲಸ ಮಾಡಿದ ಕಾರ್ಮಿಕರಿಗೆ ಪ್ರತಿ ವಾರ ತಪ್ಪದೇ ಕೂಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೂಲಿ ಹಣಕ್ಕಾಗಿ ಕಾರ್ಮಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.  


ಸುದ್ದಿ ಓದಿ