ಪ್ರಜಾಪ್ರಭುತ್ವಕ್ಕೆ ಕೋಮುವಾದವೇ ದುಷ್ಟಶಕ್ತಿ - ಕರುಣಾನಿಧಿ
ಹೊಸಪೇಟೆ ಅ, 22: ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ, ಕೋಮುವಾದವೇ ದುಷ್ಟಶಕ್ತಿಯಾಗಿದೆ ಆದ್ದರಿಂದ ಇದನ್ನು ನಾಶಮಾಡುವವರೆಗೆ ಭಾರತದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯವಿಲ್ಲ ಎಂದು ಸೌಹಾರ್ದ ಕರ್ನಾಟಕದ ಮುಖಂಡರಾದ ಎ ಕರುಣಾನಿಧಿ ತಿಳಿಸಿದರು. ಶ್ರಮಿಕ ಭವನದ ಮುಂಭಾಗದಲ್ಲಿ ನಡೆದ ಸೌಹಾರ್ದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಧಾನಿ ಮೋದಿಯವರು ದುಷ್ಟ ಶಕ್ತಿಗಳನ್ನು ನಾಶಮಾಡಬೇಕೆಂದು ಕರೆ ಕೊಡುತ್ತಾರೆ,
ಆದರೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ, ಇದು ಅಪ್ರತ್ಯಕ್ಷವಾಗಿ ಚಳುವಳಿಗಾರರನ್ನು ಗುರಿ ಮಾಡಿದೆಯಾದ್ದರಿಂದ ಇದನ್ನು ಸವಾಲಾಗಿಯೇ ಸ್ವೀಕರಿಸುತ್ತೇವೆಂದು ಹೇಳಿದರು. ಅಲ್ಲದೇ ಪ್ರತಿಭಟನೆಯ ನಿರ್ವಚನೆ ಮಾಡಿದ ಆರ್ ಎಸ್ಎಸ್ ಮುಖಂಡರಾದ ಮೋಹನ್ ಭಾಗವತ್ ಪ್ರತಿಭಟನೆಯನ್ನು ಕೇವಲ ಬೇಡಿಕೆಗಳಿಗೆ ಸೀಮಿತಗೊಳಿಸುವ ಮೂಲಕ ಉದ್ದೇಶ ಪೂರ್ವಕವಾಗಿ ಚಳುವಳಿಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಎಂದರಲ್ಲದೇ, ಪ್ರತಿಭಟನೆ ಎನ್ನುವುದು ಆಳುವ ವರ್ಗದ ಹಾಗೂ ಸರ್ಕಾರದ ವಿರುದ್ಧ ಜನಚಳುವಳಿ ಮೂಲಕ ಹೊರ ಹೊಮ್ಮುವ ಸಮಾಜದ ಅಂತರ್ಗತ ಗುಣವಾಗಿದೆಯಾದ್ದರಿಂದ ಪ್ರತಿಭಟನೆ ಎಂದೂ ಬೇಡುವುದಿಲ್ಲ ಬದಲಾಗಿ ಅದು ಎದುರಿಸುತ್ತದೆ ಮತ್ತು ಮುಖಾಮುಖಿಯಾಗಿರುತ್ತದೆ.
ಭಾರತದ ಪ್ರಭುತ್ವ ಮತ್ತು ಜನತೆಯ ಪ್ರತಿಭಟನೆ ಎರಡೂ ಭಾರತದ ನೆಲದೊಳಗಿಂದಲೇ ಹುಟ್ಟಿವೆಯಾದರೂ, ಅವು ಪರಸ್ಪರ ವಿರುದ್ಧವಾಗಿರುತ್ತವೆ ಯಾದ್ದರಿಂದ ಇವುಗಳ ಸಂಘರ್ಷದಲ್ಲಿ ಆಡಳಿತದ ಬದಲಾವಣೆಯೂ ಸೇರಿರುತ್ತದೆ ಎಂದು ತಿಳಿಸಿದರು.