ಖಿನ್ನತೆ ಮುಚ್ಚಿಡಬೇಡಿ, ಮುಕ್ತವಾಗಿ ಮಾತನಾಡಿ : ಡಿಹೆಚ್ಒ ಡಾ. ಟಿ. ಲಿಂಗರಾಜು ಕಿವಿಮಾತು
ವಿಜಯನಗರ(ಹೊಸಪೇಟೆ)ಅ.14: ದೇಹಕ್ಕೆ ಕಾಯಿಲೆ ಬರುವುದು ಎಷ್ಟು ಸಹಜವೋ, ಮನಸ್ಸಿಗೆ ಆಯಾಸ ಅಥವಾ ಖಿನ್ನತೆ ಬರುವುದು ಕೂಡ ಅಷ್ಟೇ ಸಹಜ. ಇದಕ್ಕೆ ಯಾರೂ ಅಂಜಬೇಕಿಲ್ಲ. ಸಂಕೋಚಪಡದೇ ಮಾತನಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆ ಹಾಗೂ ಸಂಕ್ಲಾಪುರದ ಟಿಎಂಎಸ್ ಸೊಸೈಟಿ ಕಾಲೇಜ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ವಿಜಯ ವಿಠಲ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಡಿದರು. ವಾಸ್ತವ ಅನುಭವಗಳ ಆಲಿಕೆ, ನೈಜ ಧ್ವನಿಗಳು ನೈಜ ಬದಲಾವಣೆ ಎಂಬ ಈ ಬಾರಿಯ ಘೋಷವಾಕ್ಯದಡಿ ವಿಶ್ವ ಮಾನಸಿಕ ದಿನಾಚರಣೆ ಆಯೋಜಿಸಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಒತ್ತಡ, ಪರೀಕ್ಷೆಯ ಭಯ, ಭವಿಷ್ಯದ ಚಿಂತೆ ಮತ್ತು ಪೋಷಕರ ನೀರೀಕ್ಷೆಗಳ ಭಾರದ ಬಗ್ಗೆ ತಿಳಿ ಹೇಳಿದ ಅವರು, ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಹಾಗೂ ಇತರರೊಂದಿಗೆ ವ್ಯಕ್ತಿಗತ ಹೋಲಿಕೆ ಮಾಡಿಕೊಳ್ಳುವುದರಿಂದ ಯುವಜನತೆಯಲ್ಲಿ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಸಮಾಜದಲ್ಲಿ ಮಾನಸಿಕ ಖಿನ್ನತೆಯನ್ನು ಮುಚ್ಚಿಡುವ ಅಥವಾ ಅದಕ್ಕೊಂದು ಕಳಂಕವಾಗಿ ನೋಡುವ ಕೆಟ್ಟ ಪದ್ಧತಿಯನ್ನು ತೊಡೆದುಹಾಕಬೇಕು. ಯಾವುದೇ ಮಾನಸಿಕ ಸಮಸ್ಯೆ ಅಥವಾ ಅತಿ ಒತ್ತಡವೆನಿಸಿದರೆ ಅದನ್ನು ಸ್ನೇಹಿತರು, ತಂದೆ-ತಾಯಿ ಅಥವಾ ಆಪ್ತಸಮಾಲೋಚಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಮಾತನಾಡುವುದರಿಂದ ಮನಸ್ಸಿನ ಭಾರ ಅರ್ಧದಷ್ಟು ಕಡಿಮೆಯಾಗುತ್ತದೆ ಎಂದು ಕಿವಿಮಾತು ಹೇಳಿದರು. ಆರೋಗ್ಯ ಇಲಾಖೆಯು ಮಾನಸಿಕ ಆರೋಗ್ಯ ರಕ್ಷಣೆಗಾಗಿ ಸದಾ ಸಿದ್ಧವಿದ್ದು, ಜಿಲ್ಲಾ ಮಟ್ಟದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಬೆಂಬಲಕ್ಕಾಗಿ ’ಟೆಲಿ-ಮಾನಸ್’ ನಂತಹ ಉಚಿತ ಹೆಲ್ಪ್ಲೈನ್ ಸೇವೆಗಳು ಲಭ್ಯವಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬದುಕಿ, ಜೀವನದ ಪ್ರತಿ ಸವಾಲನ್ನು ಧೈರ್ಯವಾಗಿ ಎದುರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಹ್ಮಣ್ಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಶಾಂತ ನಾಗಲಾಪುರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಗುಜ್ಜಲ್ ನಾಗರಾಜ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಧಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಸೇರಿದಂತೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.