ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಪ್ರಶಂಸಾರ್ಹ : ಶಾಸಕ ಸಿದ್ದು ಸವದಿ
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 04: ಮಕ್ಕಳ ಆರೋಗ್ಯ ಸಂರಕ್ಷಣೆ, ಪೌಷ್ಠಿಕ ಆಹಾರ ವಿತರಣೆ, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುವ ಪ್ರಾಮಾಣಿಕ ಸೇವೆ ಹಾಗೂ ತಾಯಂದಿರ ಆರೋಗ್ಯ ರಕ್ಷಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆ ಸರ್ವ ಕಾಲಕ್ಕೂ ಸ್ಮರಣಾರ್ಹವಾಗಿದ್ದು, ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಮನೆಗೂ ಕಲ್ಪಿಸುವಲ್ಲಿ ಮತ್ತು ಸೇವಾ ಮನೋಭಾವನೆಯಿಂದ ತಮಗೆ ಸಿಗುವ ಗೌರವಧನದಲ್ಲೇ ತೃಪ್ತರಾಗಿ ಸೇವೆಯನ್ನೇ ಧ್ಯೇಯವಾಗಿಟ್ಟುಕೊಂಡು ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಆಧರಿತ ಕಾರ್ಯಕ್ರಮಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸಲು ಹೆಣಗುತ್ತಿರುವುದು ಪ್ರಶಂಸಾರ್ಹವೆಂದು ಶಾಸಕ ಸಿದ್ದು ಸವದಿ ಹೇಳಿದರು. ರಬಕವಿಯ ಘಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಂಗನ ಮಿಲನ ಸೇವಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆಯೇ ಸಂಕಲ್ಪ, ಸಂಕಲ್ಪವೇ ಅಭಿವೃದ್ಧಿ ಎಂದು ದಣಿವರಿಯದೇ ಕಾರ್ಯಕರ್ತೆಯರು ಸಲ್ಲಿಸುವ ಸೇವೆ ಅನನ್ಯವೆಂದರು. ವೇದಿಕೆಯಲ್ಲಿ ಮೀನಾಕ್ಷಿ ಸವದಿ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಬಸವರಾಜ ಭಿಲವಡಿ, ಬಸವರಾಜ ಮಟ್ಟಿಕಲ್ಲಿ, ಬಸವರಾಜ ತೆಗ್ಗಿ, ಪ್ರದೀಪ ಜುಗಳಿ, ಸವಿತಾ ಹೊಸೂರ, ವೈಷ್ಣವಿ ಬಾಗೇವಾಡಿ ಸೇರಿದಂತೆ ಅನೇಕರಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಸವದಿ, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಸತ್ಕರಿಸಿದರು.