ಎಂ.ಬಿ. ಘಸ್ತಿ ಹುಕ್ಕೇರಿ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ
ಲೋಕದರ್ಶನ ವರದಿ
ಸಂಕೇಶ್ವರ 05 : ಹುಕ್ಕೇರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ರೈತರು ಸೋಮವಾರ ಹುಕ್ಕೇರಿ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಬಿಜೆಪಿ ಶಾಸಕ ನಿಖಿಲ್ ಉಮೇಶ ಕತ್ತಿ ಹಾಗೂ ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮಳೆಯ ಕೊರತೆಯಿಂದ ಹುಕ್ಕೇರಿ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟವನ್ನು ಅರಿತು ಸರ್ಕಾರ ಕೂಡಲೇ ಹುಕ್ಕೇರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಯಿತು.
ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗಜಾನನ ನಿಂಗಪ್ಪ ಕ್ವಳ್ಳಿ, ಸುನೀಲ ಪರ್ವತರಾವ್, ಮಾರುತಿ ಅಷ್ಟಗಿ, ನಂದು ಮುಡಶಿ, ರೋಹನ್ ನೇಸರಗಿ, ಗುರು ಕುಲಕರ್ಣಿ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.