ಭ್ರೂಣ ಲಿಂಗ ಪತ್ತೆ ಜಾಲ ಭೇದಿಸಿದ ವಿಶೇಷ ಕಾರ್ಯಪಡೆ
ಬಾಗಲಕೋಟೆ 06: ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ದಂಧೆ ನಡೆಯುತ್ತಿರುವ ಕುರಿತು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಜಾಡರ ಬಬಲಾದಿ ಗ್ರಾಮದಲ್ಲಿ ಅಕ್ರಮ ಸ್ಕ್ಯಾನಿಂಗ್ ಜಾಲವನ್ನು ಪತ್ತೆಹಚ್ಚಿ ಪೋರ್ಟೆಬಲ್ ಸ್ಕ್ಯಾನಿಂಗ್ ಯಂತ್ರ ಹಾಗೂ ಪರಿಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಅಕ್ರಮ ಜಾಲವನ್ನು ಸಾಕ್ಷ್ಯ ಸಮೇತ ಭೇದಿಸಲು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಆರೋಗ್ಯ ಸೌಧದ ಮೆಡಿಕಲ್ ಆಕ್ಟ್ ಉಪನಿರ್ದೇಶಕಿ ಶೋಭಾ ಟಿ.ಆರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುವರ್ಣ ಕುಲಕರ್ಣಿ, ರಬಕವಿ-ಬನಹಟ್ಟಿ ತಹಶೀಲ್ದಾರ ಗೀರೀಶ ಸ್ವಾದಿ ಹಾಗೂ ಆರೋಗ್ಯ ಸೌಧದ ಮನು ಅವರನ್ನೊಳಗೊಂಡ ವಿಶೇಷ ಕಾರ್ಯಪಡೆಯನ್ನು ರಚಿಸಿ ಅಕ್ಟೋಬರ 5 ರಂದು ಕಾರ್ಯಾಚರಣೆ ನಡೆಸಲಾಗಿದೆ ಎಂದರು.