ಜೂಡೋ ಸ್ಪರ್ಧೆ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ: ಜಿಲ್ಲಾಧಿಕಾರಿ
ಬಾಗಲಕೋಟೆ 09 : ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಶುಕ್ರವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ 14/17 ವಯೋಮಿತಿಯೊಳಗಿನ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು-ಗೆಲುವು ನಂತರದ ವಿಚಾರವಾಗಿದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರ ಜತೆಗೆ ಅನುಭವವನ್ನು ಪಡೆದುಕೊಳ್ಳಬೇಕು ಎಂದರು.
ಗೆಲುವೊಂದೇ ಕ್ರೀಡೆಯ ಅಂತಿಮ ಗುರಿಯಾಗಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವುದು, ತಮ್ಮ ಸಾಮಥ್ರ್ಯವನು ಗುರುತಿಸಿಕೊಳ್ಳುವುದು ಹಾಗೂ ನಿರಂತರ ಅಭ್ಯಾಸದ ಮೂಲಕ ಕೌಶಲವನ್ನು ವೃದ್ದಿಡಿಕೊಳ್ಳುವುದು ಮುಖ್ಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂದಿನ ಹಂತಕ್ಕೆ ಆಯ್ಕೆಯಾಗಬೇಕು. ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.