ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿ
ಗದಗ 17 : ನಿರ್ಭೀತ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಬಲವರ್ಧನೆಗೆ ಅಗತ್ಯ. ಸಮಾಜದ ಆಗುಹೋಗುಗಳನ್ನು ಜನರಿಗೆ ತಲುಪಿಸುವುದರ ಜತೆಗೆ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವ ಪತ್ರಕರ್ತರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಟ್ರೋಫಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಜನರು ಮತ್ತು ಆಡಳಿತದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದರ ಜತೆಗೆ, ಜನರಿಗೆ ನಿಖರ ಮಾಹಿತಿ ನೀಡುವುದು ಪತ್ರಿಕಾರಂಗದ ಪ್ರಮುಖ ಜವಾಬ್ದಾರಿಯಾಗಿದೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರು ಜನರಿಗೆ ಅಗತ್ಯ ಮಾಹಿತಿ ತಲುಪಿಸಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದರು.
ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು, ಸತ್ಯ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಪತ್ರಕರ್ತರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಅಧ್ಯಕ್ಷತೆವಹಿಸಿದ್ದರು.
ಆ.ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ, ಕಾಂಗ್ರೆಸ್ ಮುಖಂಡ ಅಶೋಕ ಮಂದಾಲಿ ಸೇರಿ ಹಲವರು ವೇದಿಕೆಯಲ್ಲಿದ್ದರು.
ಪತ್ರಕರ್ತ ಹಾಗೂ ನ್ಯಾಯವಾದಿ ರವಿಕಾಂತ ಅಂಗಡಿ ಸೇರಿ ಹಲವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಮಕ್ಕಳಿಗೆ ತಲಾ ಮೂರು ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಯಿತು.