ಶ್ರೀದೇವಿ ಪುರಾಣ ದೇಹದ ಪುರಾಣವೂ ಹೌದು: ಡಾ.ಗುರುಸ್ವಾಮಿ ಕಲಕೇರಿ
ಲೋಕದರ್ಶನ ವರದಿ
ಗದಗ 17: ಕವಿ ಚಿದಾನಂದ ಅವಧೂತರು ರಚಿಸಿದ ಶ್ರೀದೇವಿ ಪುರಾಣ ತುಂಬಾ ವಿಶಿಷ್ಠವಾದ ಗೃಂಥವಾಗಿದ್ದು, ಇದು ಶ್ರೀದೇವಿಯ ಪುರಾಣ, ಅದರಂತೆಯೇ ಈ ದೇಹದ ಪುರಾಣವೂ ಕೂಡಾ ಆಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಂಗೀತ ವಿದ್ವಾಂಸರೂ ಆದ ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳು ಹೇಳಿದರು.
ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ನಡೆದ 46ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ನೆರವೇರಿಸಿ ಅವರು ಮಾತನಾಡಿದರು.
ಈ ಜಗತ್ತು ಲೀಲಾಮಯವಾಗಿದೆ. ಈ ಸೃಷ್ಠಿಯನ್ನು ರಚನೆ ಮಾಡಿದ್ದು ಶಕ್ತಿದೇವತೆ. ಈ ಶಕ್ತಿದೇವತೆಯನ್ನು ದುರ್ಗೆ, ಬನಶಂಕರಿ, ಚಾಮುಂಡಿ, ಶಿವೆ, ಭೀಮೆ, ಜಗದಂಭಾ, ತುಳಜಾಭವಾನಿ, ಲಕ್ಷ್ಮೀ, ಸರಸ್ವತಿ, ಈ ರೀತಿ ಹತ್ತಾರು ಹೆಸರುಗಳಿಂದ ಕರೆಯುತ್ತೇವೆ. ಶಕ್ತಿ ಆರಾಧನೆ ಬಹು ಕಾಲದಿಂದ ನಮ್ಮ ಭಾರತದಲ್ಲಿ ನಡೆದು ಬಂದಿದ್ದನ್ನು ಕಾಣಬಹುದು.
ಜಗತ್ತಿನ ಅನೇಕ ದಾರ್ಶನಿಕರು ದೇವಿಯ ಆರಾಧಕರಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರು ಶಾರದಾಮಾತೆ, ಸ್ವಾಮಿವಿವೇಕಾನಂದರು, ಹುರಕಡ್ಲಿ ಅಜ್ಜನವರು, ಹೀಗೆ ಅನೇಕರು ಶ್ರೀದೇವಿಯನ್ನು ಆರಾಧನೆ, ಶ್ರೀದೇವಿಯ ಪುರಾಣವನ್ನು ಓದಿ, ಪಠಿಸಿ, ಅವರು ಒಂದರ್ಥದಲ್ಲಿ ದೇವಿಯರೇ ಅಗಿದ್ದರು ಎಂದು ಅವರು ಹೇಳಿದರು.
ಶ್ರೀದೇವಿಯ ಪುರಾಣದಿಂದ ಆಗುವ ಪ್ರಯೋಜನಗಳ ಹಲವಾರು. ಅವು ಹೇಗೆ ಎಂಬುದ್ನು ಅನೇಕ ದೃಷ್ಟಾಂತಗಳ ಮೂಲಕ ತುಂಬಾ ಮಾರ್ಮಿಕವಾಗಿ ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಗವಾಯಿಗಳು ಸಂಗೀತದೊಂದಿಗೆ ತಿಳಿಸಿದರು.
ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಅವರು ಸಮ್ಮುಖ ವಹಿಸಿದ್ದರು. ಶ್ರೀದೇವಿ ಪುರಾಣವನ್ನು ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು.
ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ, ಮಹಿಳಾ ಅಧ್ಯಕ್ಷರಾದ ಶಿವಲೀಲಾ ಅಕ್ಕಿ, ಶಿವಾನುಭವ ಸಮಿತಿ ಅಧ್ಯಕ್ಷ ಡಾ.ರಾಜೇಂದ್ರ ಗಡಾದ ಮತ್ತಿತರರು ವೇದಿಕೆಯಲ್ಲಿದ್ದರು. ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕ ಮಂಡಳಿ ಸದಸ್ಯರು ಸದ್ಭಕ್ತರು ಕಾರ್ಯಕ್ರಮದಲ್ಲಿದ್ದರು.