ಬೆಳಗಾವಿ

ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಸ್ವಾಗತ: ಕುಂಭಮೇಳದೊಂದಿಗೆ ನೆರವೇರಿದ ಅದ್ಧೂರಿ ಮೆರವಣಿಗೆ

ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಸ್ವಾಗತ: ಕುಂಭಮೇಳದೊಂದಿಗೆ ನೆರವೇರಿದ ಅದ್ಧೂರಿ ಮೆರವಣಿಗೆ


ಸವದತ್ತಿ  18: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ ಹಾಗೂ ನಗರಸಭೆಯ ಸಂಯುಕ್ತ ಆಶ್ರಯದಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಚ್ಚು ಹಚ್ಚಿದ ಧೀರ ಮಹಿಳೆ, ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವದ ಅಂಗವಾಗಿ ಆಗಮಿಸಿದ ವಿಜಯ ಜ್ಯೋತಿಯನ್ನು ಕುಂಭಮೇಳ ಹಾಗೂ ಮಂಗಳವಾದ್ಯಗಳೊಂದಿಗೆ ಅತ್ಯಂತ ಸಡಗರ,


ಸಂಭ್ರಮ ಮತ್ತು ಗೌರವದಿಂದ ಶಾಸಕ ವಿಶ್ವಾಸ ವೈದ್ಯ ಹಾಗೂ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.ಇಲ್ಲಿನ ಎಪಿಎಂಸಿ ಸರ್ಕಲ್‌ನಲ್ಲಿ ಆಗಮಿಸಿದ ವಿಜಯ ಜ್ಯೋತಿಗೆ ಶಾಸಕ ವಿಶ್ವಾಸ ವೈದ್ಯ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗಣ್ಯರು ಪುಷ್ಪವೃಷ್ಟಿ ಕರೆದು, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ, ಬ್ರಿಟಿಷರ ವಿರುದ್ಧ ಪ್ರಥಮವಾಗಿ ಕಹಳೆ ಮೊಳಗಿಸಿ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಕೀರ್ತಿ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಸಲ್ಲುತ್ತದೆ. ಚೆನ್ನಮ್ಮನವರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಿದೆ. ಅವರ ವಿಜಯೋತ್ಸವದ ಜ್ಯೋತಿಯನ್ನು  ಬರಮಾಡಿಕೊಳ್ಳುತ್ತಿರುವುದು. 


 ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯ, ಎಂದರು. ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದ ಅವರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಪ್ರತಿಮ ಶೌರ್ಯ, ಸಾಹಸ ಮೆರೆದ ಧೀರ ವನಿತೆ, ಕರುನಾಡಿನ ಹೆಮ್ಮೆಯ ಪ್ರತೀಕ ವೀರರಾಣಿ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ವಿಜಯೋತ್ಸವದ ಸ್ಮರಣಾರ್ಥವಾಗಿ ನಾಡಿನಲ್ಲಿ ವಿಜಯೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು  ತಿಳಿಸಿದ್ದರು.


ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಮೊಟ್ಟಮೊದಲ ಬಾರಿಗೆ ಸಶಸ್ತ್ರ ಹೋರಾಟ ಹೂಡಿ, ಪರಕೀಯರ ಅಧಿಕಾರವನ್ನು ಮೆಟ್ಟಿನಿಂತು ವಿಜಯ ಸಾಧಿಸಿದ ಕಿತ್ತೂರು ಚೆನ್ನಮ್ಮನವರ ಐತಿಹಾಸಿಕ ವಿಜಯದ ದಿನವು ಪ್ರತಿಯೊಬ್ಬ ಕನ್ನಡಿಗನಲ್ಲೂ ದೇಶಪ್ರೇಮವನ್ನು ಜಾಗೃತಗೊಳಿಸುತ್ತದೆ. 


ಸುದ್ದಿ ಓದಿ