ಬೆಳಗಾವಿ

ಹಾರೂಗೇರಿಯಲ್ಲಿ ಅಕ್ರಮ ಫ್ಲೆಕ್ಸ್ಗ ಹಾಗೂ ಕಟೌಟ್‌ಗಳ ಹಾವಳಿ: ಸಾರ್ವಜನಿಕರ ಆಕ್ರೋಶ

ಹಾರೂಗೇರಿಯಲ್ಲಿ ಅಕ್ರಮ ಫ್ಲೆಕ್ಸ್ಗ ಹಾಗೂ ಕಟೌಟ್‌ಗಳ ಹಾವಳಿ: ಸಾರ್ವಜನಿಕರ ಆಕ್ರೋಶ

ಲೋಕದರ್ಶನ ವರದಿ 

          ಹಾರೂಗೇರಿ 17 : ವೇದಾಂತ ಪರಿಷತ್ ಜಾತ್ರಾಮಹೋತ್ಸವಕ್ಕೆ ಹಾರೂಗೇರಿ ಸಿಂಗಾರಗೊಂಡಿರುವ ಬೆನ್ನಲ್ಲೇ ಪಟ್ಟನದ ವಿವಿಧೆಡೆ ಅಲವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ಹಾಗೂ ಕಟೌಟ್‌ಗಳು ಪಟ್ಟಣದ ಸೌಂದರ್ಯ ಹಾಳುಗೆಡವಿವೆ. ಮತ್ತೊಂದೆಡೆ ಜತ್‌-ಜಾಂಬೋಟಿ ರಾಜ್ಯ ಹೆದ್ದಾರಿ ನಡುವೆ ಇಂತಹ ಫ್ಲೆಕ್ಸ್‌ಗಳು ಸಾಲುಗಟ್ಟಿ ರಾರಾಜಿಸುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಪುರಸಭೆ ದಿವ್ಯಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

        ಪಟ್ಟಣದಲ್ಲಿ ಫ್ಲೆಕ್ಸ್‌ ಹಾವಳಿಗೆ ಕಡಿವಾಣವೇ ಇಲ್ಲದಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಫ್ಲೆಕ್ಸ್‌ ಅಳವಡಿಕೆಗೆ ರಸ್ತೆ ಸಂಚಾರಿ ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಹೆದ್ದಾರಿ ಅಕ್ಕಪಕ್ಕ ಹಾಗೂ ಡಿವೈಡರ್ ಮಧ್ಯದಲ್ಲೇ ಫ್ಲೆಕ್ಸ್‌ಗಳನ್ನು ಎಲ್ಲೆಂದರಲ್ಲಕಿ ಅಳವಡಿಸಲಾಗಿದೆ. ಅಥಣಿ ರಸ್ತೆಯ ಬಾಬಾನಂದ ನಗರ ವೃತ್ತದಿಂದ ಗೋಕಾಕ ರಸ್ತೆಯುದ್ದಕ್ಕೂ ಕಟೌಟ್‌ಗಳು ತಲೆಯೆತ್ತಿವೆ. ಇನ್ನು ಅರ್ಜಿ ಸಲ್ಲಿಸಿದರೆ ಹೆದ್ದಾರಿಯಲ್ಲಿ ಅನುಮತಿ ನೀಡಲಾಗುವುದೆಂಬ ಮುಖ್ಯಾಧಿಕಾರಿಯ ನಡೆ ಸಂಚಾರಿ ಕಾನೂನು ಬಾಹಿರವಾಗಿದೆ. 

           ಡಿವೈಡರ್ ನುಂಗಿದ ಫ್ಲೆಕ್ಸ್‌ಗಳು : ಪಟ್ಟಣದಲ್ಲಿ ವಾಹನಗಳು ಏಕಮುಖವಾಗಿ ಸಂಚರಿಸಲು ನಿರ್ಮಿಸಲಾದ ಡಿವೈಡರ್‌ನ್ನು ಇದೀಗ ಫ್ಲೆಕ್ಸ್‌ಗಳು ಕಬಳಿಸಿದ್ದು, ಚಾಲನೆಗೆ ಅಡ್ಡಿಯಾಗಿರುವುದರಿಂದ ಸವಾರರಿಗೆ ದಾರಿಕಾಣದೇ ಅಪಘಾತದ ಭೀತಿ ಸೃಷ್ಠಿಸಿದೆ. ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಪ್ರಾಣಭಯದಿಂದ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ತಿರುವುಗಳಲ್ಲಿ ವಾಹನಗಳ ಚಾಲನೆ ಇನ್ನೂ ಅಪಾಯಕಾರಿಯಾಗಿದೆ. 

            ಸ್ವಪ್ರತಿಷ್ಠೆಯ ಭರಾಟೆ : ನಿಯಮ ಬಾಹಿರವಾಗಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಿರುವವರಲ್ಲಿ ರಾಜಕಾರಣಿಗಳು ಮತ್ತು ಅವರ ಬಂಬಲಿಗರ ಪಾಲೇ ಹೆಚ್ಚಿದೆ. ಹಾಲಿ, ಮಾಜಿ ಶಾಸಕರ ಬೆಂಬಲಿಗರು ಜಿದ್ದಿಗೆ ಬಿದ್ದಂತೆ ಬ್ಯಾನರ್‌ಗಳನ್ನು ಅಳವಡಿಸಿರುವುದಲ್ಲದೇ ಅಳತೆಯನ್ನೂ ಹಿಗ್ಗಿಸಿದ್ದಾರೆ. ಜಾತ್ರೆಗೆ ಶುಭಾಶಯ ಕೋರುವುದಕ್ಕಿಂತ ಸ್ವಪ್ರತಿಷ್ಠೆ, ಪ್ರಚಾರದ ಭರಾಟೆಯೇ ಮೇಲಾಗಿದೆ. 


ಸುದ್ದಿ ಓದಿ