ಇಂಡಿ

ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾದ ಕಬ್ಬು

ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾದ ಕಬ್ಬು

            ಇಂಡಿ 24 : ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶಾರ್ಟ್‌ ಸರ್ಕ್ಯೂಟ್ ನಿಂದಾಗಿ ಸುಮಾರು ಐದು ಎಕರೆ ಕಬ್ಬು  ಸುಟ್ಟ ಕರಗಲಾದ ಘಟನೆ ನಡೆದಿದೆ.ತಡವಲಗಾ ಗ್ರಾಮದ ರಾವುತಪ್ಪ ಶರಣಪ್ಪ ಇಂಡಿ (ಚಿನ್ನಪಗೋಳ) ಇವರಿಗೆ ಸೇರಿದ ರೈತನ ಕಬ್ಬು ಎಂದು ತಿಳಿದು ಬಂದಿದೆ. ಕಟಾವಿಗೆ ಬಂದಿದ್ದ ಫಸಲು ಕಣ್ಣಮುಂದೆಯೇ ಬೆಂಕಿ ಆಹುತಿಯಾಗಿದ್ದನ್ನು ಕಂಡು ರೈತ ಕಂಗಾಲಾಗಿದ್ದಾರೆ. ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಇಂದು ಮಧ್ಯಾಹ್ನ ಸಮಯದಲ್ಲಿ ಶಾರ್ಟ್‌ ಸರ್ಕ್ಯೂಟ್ ಕಾರಣ ಬೆಂಕಿ ಕಾಣಿಸಿಕೊಂಡಿದೆ.

           ಬಿಸಿಲಿನ ತಾಪ ಮತ್ತು ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಹೊಲವನ್ನು ಆವರಿಸಿಕೊಂಡಿದೆ.ಬೆಂಕಿ ಕಾಣಿಸಿಕೊಂಡ ತಕ್ಷಣ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಟ್ಯಾಂಕರ್ ಹಾಗೂ ಬಿಂದಿಗೆಗಳ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಈ ಸುದ್ದಿ ತಿಳಿದು ಇಂಡಿ ಅಗ್ನಿಶಾಮಕ ಠಾಣಾಧಿಕಾರಿ ಭೀಮಶಂಕರ್ ಪ್ರಮುಖ ಫೈರ್ ಫೈಟರ್ ರಾಜು ರಾಥೋಡ್ ಅಗ್ನಿಶಾಮಕ ಚಾಲಕ ಮಲ್ಲಿಕಾರ್ಜುನ್ ಗೋಟ್ಯಾಳ ಫೈಯರ್ ಫೈಟರ್ ಮಹಮ್ಮದ್ ಅಲಿ ಬಂತನಾಳ ಮಾಳಪ್ಪ ಪೂಜಾರಿ ಇವರ ನೇತೃತ್ವದಲ್ಲಿ  ಬೆಂಕಿ ನಂದಿಸಲು ಹರಸಾಹಸ ಪಟ್ಟರು.

              ಕೂಡಾ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬಹುತೇಕ ಕಬ್ಬು ಸುಟ್ಟು ಕರಕಲಾಗಿದೆ.ಸಾಲ ಮಾಡಿ, ಹಗಲಿರುಳು ಶ್ರಮವಹಿಸಿ ಕಬ್ಬು ಬೆಳೆದಿದ್ದೆ. ಇನ್ನೇನು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ಈ ಅವಘಡ ಸಂಭವಿಸಿದೆ.  ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ನೊಂದ ರೈತ ರಾವುತಪ್ಪ ಶರಣಪ್ಪ ಇಂಡಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಬೆಳೆ ನಷ್ಟದ ಅಂದಾಜು ಮಾಡಿದ್ದಾರೆ.

                 ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.ಈ ಸುದ್ದಿ ತಿಳಿದು ಗ್ರಾಮ ಆಡಳಿತ ಅಧಿಕಾರಿ ಮಹಾತೇಶ ಗುರುಬಟ್ಟಿ ಬೇಟಿ ನೀಡಿ ಪರೀಶೀಲನೆ ಮಾಡಿ ಪಂಚನಾಮೆ ಮಾಡಿಕೊಂಡರು. ಇದು ಹೋರ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ. 


ಸುದ್ದಿ ಓದಿ