ಇಂಡಿ

ಈ ಬಾರಿಯ ಶಾಂತೇಶ್ವರ ಜಾತ್ರೆ: ಭೀಮನಗೌಡ ಪಾಟೀಲ ಘೋಷಣೆ

ಈ ಬಾರಿಯ   ಶಾಂತೇಶ್ವರ ಜಾತ್ರೆ: ಭೀಮನಗೌಡ ಪಾಟೀಲ ಘೋಷಣೆ


ಲೋಕದರ್ಶನ ವರದಿ  

           ಇಂಡಿ 20: ಈ ಬಾರಿಯ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವವನ್ನು ನೆರವೇರಿಸಲು ದಾದಾಗೌಡರ ಮನೆದವರೇ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಡ ಹೇರುತ್ತಿದ್ದು ಈ ಬಾರಿ ನನ್ನ ನೇತೃತ್ವದಲ್ಲಿಯೇ ಜಾತ್ರೆ ನಡೆಸಲು ನಿರ್ಧರಿಸಿದ್ದೇನೆ ಎಂದು ಭೀಮನಗೌಡ ದಾದಾಗೌಡ ಪಾಟೀಲ ಹೇಳಿದರು.ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ದಾಖಲಾತಿ ಸಮೇತ ಮಾಹಿತಿ ನೀಡಿದ ಅವರು, ಈ ಹಿಂದಿನ ಶ್ರೀ ಶಾಂತೇಶ್ವರ ದೇವಸ್ಥಾನ ಕಮಿಟಿಯವರಿಗೆ ಲೆಕ್ಕಪತ್ರ ನೀಡುವಂತೆ ಸಾರ್ವಜನಿಕರು ಕೇಳಿದರೂ ಇದುವರೆಗೂ ಲೆಕ್ಕಪತ್ರ ಒದಗಿಸಿಲ್ಲ.

            ಹೀಗಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ಊರ ಗೌಡಕಿ ಮನೆತನವಾದ ದಾದಾ ಗೌಡರ ಮನೆತನದವರೇ ಈ ಬಾರಿಯ ಶಾಂತೇಶ್ವರ ಜಾತ್ರೆಯನ್ನು ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಜವಾಬ್ದಾರಿ ವಹಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಜಾತ್ರಾ ಮಹೋತ್ಸವಕ್ಕೆ ದೇಣಿಗೆ ನೀಡಲು ಇಚ್ಛಿಸುವ ಭಕ್ತರು ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇಣಿಗೆ ಸಲ್ಲಿಸಬಹುದು. ಅಲ್ಲದೆ, ಜಾತ್ರಾ ಉತ್ಸವ ಸಮಿತಿಯ ಹೆಸರಿನಲ್ಲಿ 12ರಿಂದ 15 ಜನರನ್ನು ನೇಮಕ ಮಾಡಲಾಗುವುದು. ಸಮಿತಿಯ ಸದಸ್ಯರು ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು. 

            ಶ್ರೀ ಶಾಂತೇಶ್ವರ ದೇವಸ್ಥಾನದ ಜಾತ್ರೆ ಎಲ್ಲರ ಧಾರ್ಮಿಕ ಭಾವನೆ ಹಾಗೂ ಊರಿನ ಗೌರವದ ಪ್ರತೀಕವಾಗಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ, ಅನ್ಯೋನ್ಯತೆಯಿಂದ ಕೈಜೋಡಿಸಿ ಈ ಬಾರಿಯ ಶಾಂತೇಶ್ವರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಭೀಮನಗೌಡ ಪಾಟೀಲ ಮನವಿ ಮಾಡಿದರು.ಈ ಹಿಂದಿನ ಕಮೀಟಿಯನ್ನು ಸಾರ್ವಜನಿಕವಾಗಿ ರದ್ದು ಮಾಡಿದ್ದೇವೆ.

            ಜಾತ್ರಾ ಮಹೋತ್ಸವದ ಪೂರ್ವದಲ್ಲಿ ಅಥವಾ ನಂತರದಲ್ಲಿ ನಾನು ಒಂದು ಕಮೀಟಿ ರಚಿಸಲಿದ್ದೇನೆ. ಅಲ್ಲಿಯವರೆಗೂ ನನ್ನ ನೇತೃತ್ವದಲ್ಲೇ ದೇವಸ್ಥಾನದ ಎಲ್ಲ ಹೊಣೆಗಾರಿಕೆ ನಡೆಯಲಿದೆ ಎಂದರು.ಪ್ರಕಾಶ ಅಳ್ಳಗಿ, ಮಂಜುನಾಥ ತೆನ್ನೆಳ್ಳಿ, ರಾಜು ಹದಗಲ್, ಶಾಂತು ಶಿರಕನಹಳ್ಳಿ, ಸಂತೋಷ ಕಕ್ಕಳಮೇಲಿ, ಬಸವರಾಜ ಮೈದರಗಿ, ಮಲ್ಲಿಕಾರ್ಜುನ ಹದಗಲ, ಶಾಂತು ತೆನ್ನೆಳ್ಳಿ, ಸಂಗುಗೌಡ ಪಾಟೀಲ, ರವಿಗೌಡ ಪಾಟೀಲ, ಶಿವಾನಂದ ಬೋಡಿ, ಸಾತು ತೆನ್ನೆಳ್ಳಿ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ