ತದ್ದೇವಾಡಿ ಗ್ರಾಮದಲ್ಲಿ ಕೊನೆಗೂ ಬೋನಿಗೆ ಬಿದ್ದ (ಸೆರೆ ಸಿಕ್ಕ) ಚಿರತೆ
ಲೋಕದರ್ಶನ ವರದಿ
ಇಂಡಿ 18 : ಸಮೀಪದ ಚಡಚಣ ತಾಲ್ಲೂಕಿನ ತದ್ದೇವಾಡಿ ಗ್ರಾಮದಲ್ಲಿ ಬುಧವಾರ ಕೊನೆಗೂ ಬೋನಿಗೆ ಬಿದ್ದ ಚಿರತೆಯನ್ನು ಹಿಡಿಯಲಾಗಿದೆ ಎಂದು ಇಂಡಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ಲೋಕದರ್ಶನ ವಾಹಿನಿಗೆ ತಿಳಿಸಿದ್ದಾರೆ.
ಈ ಚಿರತೆ ಹಿಡಿಯಲು ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ. ಕುಶನಾಳ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಲ್ವರಾಜ್ ನಾಯಕ ಅವರ ಮಾರ್ಗದರ್ಶನದಲ್ಲಿ ಬೋನು ಅಳವಡಿಸಲಾಗಿತ್ತು ಎಂದು ಧುಳೆ ಮಾಹಿತಿ ನೀಡಿದರು.
ಈ ವೇಳೆ, ಚಡಚಣ ತಹಶೀಲ್ದಾರ ಎಸ್ ಎ.ಇಂಗಳೆ, ಚಡಚಣ ಪಿಎಸ್‌ಐ ಮಂಜುನಾಥ ತಿರಕನ್ನವರ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿಗಳಾದ ಎಚ್ ಕೆ.ಮಳ್ಳಿ, ಹಣಮಂತ ಲೋಣಿ, ಯಲ್ಲಪ್ಪ, ಫ ಸಿಂಧಖೇಡ, ಪ್ರವೀಣ ಹಚ್ಚಾಳಕರ ಹಾಗೂ ರೈತ ಹೋರಾಟಗಾರ ನಾಗನಾಥಗೌಡ ಬಿರಾದಾರ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.
ಕೆಲಹೊತ್ತು ಹೈಡ್ರಾಮಾ: ತದ್ದೇವಾಡಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಅನೇಕ ಹಸು ಗಳನ್ನು ಕೊಂದು ಹಾಕಿದೆ. ಆ ಚಿರತೆ ದಾಳಿಯಿಂದ ಹಸುಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಹಾಗೂ ಸ್ಥಳಿಯ ಶಾಸಕರಾದ ವಿಠೋಲ ಕಟಕದೊಂಡ ಅವರು ಸ್ಥಳಕ್ಕೆ ಬರುವವರಿಗೆ ನಾವು ಸೆರೆ ಹಿಡಿದ ಚಿರತೆಯನ್ನು ನೀಡುವುದಿಲ್ಲ ಎಂದು ರೈತ ಮುಖಂಡರಾದ ನಾಗನಾಥಗೌಡ ಬಿರಾದಾರ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಈ ಸುದ್ದಿ ತಿಳಿದು ಚಡಚಣ ತಹಶೀಲ್ದಾರ್ ಎಸ್ ಎ ಇಂಗಳೆ ಹಾಗೂ ಚಡಚಣ ಪಿ ಎಸ್ ಐ ಮಂಜುನಾಥ ತಿರಕನ್ನವರ ಅವರು ತಮ್ಮ ಬೇಡಿಕೆಯನ್ನು ಶಾಸಕರಿಗೂ ಹಾಗೂ ಜಿಲ್ಲಾ ಅಧಿಕಾರಿಗಳಿಗೂ ತಿಳಿಸಿ ಹೆಚ್ಚಿನ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.