ಬಳ್ಳಾರಿ

ಗೆಣಿಕೆಹಾಳ್ ಗ್ರಾಮದಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

ಗೆಣಿಕೆಹಾಳ್ ಗ್ರಾಮದಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಬಾಲ್ಯ ವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ

       ಬಳ್ಳಾರಿ 18: ಕುರುಗೋಡು ತಾಲೂಕಿನ ಗೆಣಿಕೆಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ‘ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ' ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

         ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಬಾಲ/ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

          ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾ ಅವರು ಮಾತನಾಡಿ, ಕಾಯ್ದೆಯು 2007ರ ಜನವರಿ 11ರಿಂದ ಜಾರಿಗೆ ಬಂದಿದೆ. ಹುಡುಗಿಗೆ 18 ವರ್ಷ ಹಾಗೂ ಹುಡುಗನಿಗೆ 21 ವರ್ಷ ತುಂಬುವ ಮೊದಲು ಮಾಡುವ ವಿವಾಹವೇ ಬಾಲ್ಯ ವಿವಾಹವಾಗಿದೆ.                  ಈ ಕಾಯ್ದೆಯು ಉಲ್ಲಂಘನೆಯಾದಲ್ಲಿ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ, ಅಥವಾ ಎರಡೂ ವಿಧಿಸಬಹುದಾಗಿದೆ. ಪೋಷಕರು, ಪುರೋಹಿತರು ಹಾಗೂ ಮದುವೆಗೆ ಸಹಕರಿಸಿದ ಎಲ್ಲರೂ ಶಿಕ್ಷೆಗೆ ಒಳಗಾಗುತ್ತಾರೆ. ತುರ್ತು ಸಂದರ್ಭದಲ್ಲಿ 1098 ಮಕ್ಕಳ ಸಹಾಯವಾಣಿ ಅಥವಾ 112 ತುರ್ತು ಸೇವೆಗೆ ಕರೆ ಮಾಡಿ ದೂರು ನೀಡಬಹುದು ಎಂದು ಹೇಳಿದರು. 

         ಗೆಣಿಕೆಹಾಳ್ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ರೇಣುಕಾ ಅವರು ಮಾತನಾಡಿ, ಬಾಲ್ಯ ವಿವಾಹದಿಂದ ಕಿಶೋರಿಯರಲ್ಲಿ ರಕ್ತಹೀನತೆ, ತಾಯಿ ಮತ್ತು ಶಿಶು ಮರಣ, ಅವಧಿಪೂರ್ವ ಹಾಗೂ ಕಡಿಮೆ ತೂಕದ ಮಕ್ಕಳ ಜನನ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದರು. ಹುಡುಗರಿಗೆ 23 ವರ್ಷ ಹಾಗೂ ಹೆಣ್ಣುಮಕ್ಕಳಿಗೆ 20 ವರ್ಷ ತುಂಬಿದ ನಂತರ ಮದುವೆಯಾಗುವುದರಿಂದ ಅವರು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ ಎಂದು ತಿಳಿಸಿದರು. 

       ಆರೋಗ್ಯ ನೀರೀಕ್ಷಣಾಧಿಕಾರಿ ಷಡಕ್ಷರಯ್ಯ ಅವರು ಹದಿಹರೆಯದವರ ಸ್ನೇಹಿ ಆರೋಗ್ಯ ಕೇಂದ್ರ ‘ಸ್ನೇಹಾ ಕ್ಲಿನಿಕ್' ಕುರಿತು ತಿಳಿಸಿ, 10 ರಿಂದ 19 ವರ್ಷದ ಮಕ್ಕಳು ತಮ್ಮ ಯಾವುದೇ ದೈಹಿಕ ಅಥವಾ ಮಾನಸಿಕ ಗೊಂದಲಗಳಿಗೆ ಸಹಾಯವಾಣಿ ಸಂಖ್ಯೆಗಳಾದ 104 ಹಾಗೂ ‘ಹಲೋ ಮೈತ್ರಿ' (08047104234) ಸಂಪರ್ಕಿಸಬಹುದು ಎಂದರು.

            ವಾರಕ್ಕೊಮ್ಮೆ ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳ ಸೇವನೆ ಹಾಗೂ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಕ ಮಾತ್ರೆಗಳನ್ನು ಸೇವಿಸುವ ಕುರಿತು ಜಾಗೃತಿ ಮೂಡಿಸಿದರು. ಆಪ್ತ ಸಮಾಲೋಚಕ ಮಹಬೂಬ್ ಭಾಷಾ ಅವರು ವೈಯಕ್ತಿಕ ಸ್ವಚ್ಛತೆ, ಸಮತೋಲನ ಆಹಾರ ಮತ್ತು ಸ್ಯಾನಿಟರಿ ಪ್ಯಾಡ್ ಬಳಕೆ ಹಾಗೂ ವಿಲೇವಾರಿ ಬಗ್ಗೆ ಕರಪತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಹುಸೇನ್ ಭಾಷಾ, ಸಮುದಾಯ ಆರೋಗ್ಯ ಅಧಿಕಾರಿ ಸೈಯದ್ ಸುಲ್ತಾನ, ಶಾಲಾ ಶಿಕ್ಷಕ ವೃಂದದವರು ಹಾಗೂ ಹದಿಹರೆಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ