ಮಣಿಪುರದಲ್ಲಿ ಶಂಕಿತ ಎಲ್ಪಿಜಿ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಮಹಿಳೆ, ಇಬ್ಬರು ಅಪ್ರಾಪ್ತ ಪುತ್ರರು ಸಾವು
ಇಂಫಾಲ್, ನವೆಂಬರ್ 18 : ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಎಲ್ಪಿಜಿ ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದೆ ಎನ್ನಲಾದ ಭೀಕರ ಅಗ್ನಿ ಅವಘಡದಲ್ಲಿ 37 ವರ್ಷದ ಮಹಿಳೆ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಪುತ್ರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ನಂಬೋಲ್ ಪ್ರದೇಶದ ಮೈಬಾಮ್ ಚಿಂಗ್ನಿಂಗ್ ಮಖಾ ಲೈಕೈನಲ್ಲಿ ಮಂಗಳವಾರ ರಾತ್ರಿ ಈ ದುರಂತ ಸಂಭವಿಸಿದೆ. ಮನೆಯೊಳಗೆ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯ ಕಟ್ಟಡಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಖಂಜರಕ್ಪಮ್ (ಒ) ರಂಜನಾ (37), ಅವರ ಪುತ್ರರಾದ ಪಿಬಾರೆಲಂಗನ್ಬಾ ಮತ್ತು ಪೊಯಿರೆಂಗಾಂಬಾ ಎಂದು ಗುರುತಿಸಲಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮೂವರೂ ಮನೆಯೊಳಗೆ ಸಿಲುಕಿಕೊಂಡಿದ್ದು, ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ರಂಜನಾ ಅವರ ಪತಿ ಖ. ನರೇಂದ್ರ ಅವರಿಗೆ ಸುಟ್ಟ ಗಾಯಗಳಾಗಿದ್ದು, ಪಕ್ಕದ ಮನೆಯ 13 ವರ್ಷದ ಬಾಲಕನೂ ಗಾಯಗೊಂಡಿದ್ದಾನೆ. ಗಾಯಾಳುಗಳಿಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಮತ್ತು ಸ್ಫೋಟಕ್ಕೆ ಕಾರಣವಾದ ಅಂಶಗಳ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಮೃತದೇಹಗಳನ್ನು ಹೊರತೆಗೆದು ಅಗತ್ಯ ಕಾನೂನು ಮತ್ತು ವೈದ್ಯಕೀಯ ಪ್ರಕ್ರಿಯೆಗಳಿಗಾಗಿ ರವಾನಿಸಲಾಗಿದೆ.
ಎಲ್ಪಿಜಿ ಅನಿಲ ಸೋರಿಕೆಯಿಂದಲೇ ಬೆಂಕಿ ಕಾಣಿಸಿಕೊಂಡಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.