ಬಳ್ಳಾರಿ

ಯುವ ಪೀಳಿಗೆಯೇ ದೇಶದ ಭವಿಷ್ಯ: ಮಾದಕ ವಸ್ತುಗಳ ವ್ಯಸನದಿಂದ ದೂರವಿರಲು ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕರೆ

ಯುವ ಪೀಳಿಗೆಯೇ ದೇಶದ ಭವಿಷ್ಯ: ಮಾದಕ ವಸ್ತುಗಳ ವ್ಯಸನದಿಂದ ದೂರವಿರಲು ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕರೆ
The younger generation is the future of the nation: District Judge Siddalinga Prabhu urges them to s

         ಬಳ್ಳಾರಿ 18 : ಯುವಕರು ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದೆ, ದೇಶದ ಪ್ರಗತಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು. 

           ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಶ್ರೀಮೇಧ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಮಾದಕ ದ್ರವ್ಯ ಮುಕ್ತ ಭಾರತ' ವಿಶೇಷ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

               ಯುವ ಪೀಳಿಗೆಯನ್ನು ಹಾಳು ಮಾಡಲು ಕೆಲವು ಬಾಹ್ಯ ಹಾಗೂ ಆಂತರಿಕ ಕೆಟ್ಟ ಶಕ್ತಿಗಳು ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಯುವಕರನ್ನು ದುಶ್ಚಟಗಳಿಗೆ ದೂಡುತ್ತಿವೆ. ಯುವ ಜನತೆಯನ್ನು ಪ್ರೇರೇಪಿಸಿ, ಅವರನ್ನು ತಪ್ಪುದಾರಿಗೆಳೆಯುವ ಈ ಕೆಟ್ಟ ದೃಷ್ಟಿಯ ವಿರುದ್ಧ ಎಚ್ಚೆತ್ತುಕೊಳ್ಳುವುದು ಅತಿ ಅವಶ್ಯಕ ಎಂದು ಎಚ್ಚರಿಸಿದರು. 

              ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್‌. ಹೊಸಮನೆ ಅವರು, ‘ಮಾದಕ ದ್ರವ್ಯ ಮುಕ್ತ ಭಾರತ’ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.  

             ಬಳ್ಳಾರಿ ನಗರ ಡಿ.ವೈ.ಎಸ್‌.ಪಿ ಗೋವಿಂದ ರಾಜು ಅವರು ಮಾತನಾಡಿ, ಎನ್‌ಡಿಪಿಎಸ್ ಕಾಯ್ದೆಯನ್ನು ಕೇಂದ್ರ ಸರ್ಕಾರವು 1985ರಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆಯ ಅಡಿಯಲ್ಲಿ ಡ್ರಗ್ಸ್‌ ಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಸ್ಮಾಲ್ ಕ್ವಾಂಟಿಟಿ ಇದರಡಿ ಸಿಕ್ಕಿಬಿದ್ದರೆ 1 ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ.

               ಇಂಟರ್ ಮೀಡಿಯೇಟ್ ಕ್ವಾಂಟಿಟಿ ಇದು ಸ್ಮಾಲ್ ಕ್ವಾಂಟಿಟಿಗಿಂತ ಹೆಚ್ಚಿದ್ದು, 1 ರಿಂದ 10 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ. ಲಾರ್ಜ್‌ ಕ್ವಾಂಟಿಟಿ ಇದರಡಿ 10 ರಿಂದ 20 ವರ್ಷಗಳವರೆಗೆ ಅಥವಾ ಕೆಲವೊಮ್ಮೆ ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ಆಸ್ಪತ್ರೆಯ ಮನಃಶಾಸ್ತ್ರಜ್ಞ ಶರ್ಮಸ್ ವಲಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ತಂಬಾಕು (ನಿಕೋಟಿನ್), ಗಾಂಜಾ, ಓಪಿಯಡ್,

             ಮಾದಕ ದ್ರವ್ಯಗಳು ಮತ್ತು ಆಲ್ಕೋಹಾಲ್ ನಂತಹ ವಸ್ತುಗಳು ನಮ್ಮ ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಹಾನಿಕಾರಕ ಪರಿಣಾಮ ಬೀರುತ್ತವೆ. ಸಂಶೋಧನೆಗಳ ಪ್ರಕಾರ, 15 ರಿಂದ 20 ವರ್ಷದೊಳಗಿನ ಯುವಕರು/ಕಿಶೋರಾವಸ್ಥೆಯವರು ಇಂತಹ ಮಾದಕ ವಸ್ತುಗಳ ಬಳಕೆಯನ್ನು ಹೆಚ್ಚಾಗಿ ಪ್ರಾರಂಭಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 


ಸುದ್ದಿ ಓದಿ