ಸಕ್ಕರೆ ಕಾರ್ಖಾನೆ ಆರಂಭದ ಬೆನ್ನಲ್ಲೇ ಮಹಾಲಿಂಗಪುರದಲ್ಲಿ ಟ್ರಾಫಿಕ್ ಕಿರಿಕಿರಿ
ಮಹಾಲಿಂಗಪುರ 12 : ದಿನದಿಂದ ದಿನಕ್ಕೆ ಜನಸಂಖ್ಯೆ, ವಾಣಿಜ್ಯ ಚಟುವಟಿಕೆ ಹಾಗೂ ವಾಹನಗಳ ಸಂಖ್ಯೆಯಲ್ಲಿ ಬೆಳೆಯುತ್ತಿರುವ ಮಹಾಲಿಂಗಪುರ ನಗರದಲ್ಲಿ ಸಂಚಾರ ವ್ಯವಸ್ಥೆ ಮಾತ್ರ ಇನ್ನೂ ಸುಧಾರಣೆ ಕಂಡಿಲ್ಲ. ಇದೀಗ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿರುವುದರಿಂದ ಭಾರೀ ವಾಹನಗಳ ಸಂಚಾರವೂ ಹೆಚ್ಚಾಗಿದ್ದು, ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮಹಾಲಿಂಗಪುರ ನಗರವು ಸಂಗಾನಟ್ಟಿ, ಸಮೀರವಾಡಿ, ಮುಧೋಳ, ಎಪಿಎಂಸಿ ಸೇರಿದಂತೆ ವಿವಿಧ ಭಾಗಗಳಿಂದ ಸಂಪರ್ಕ ಹೊಂದಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ನಗರಕ್ಕೆ ಪ್ರತಿದಿನ ನೂರಾರು ವಾಹನಗಳು ಆಗಮಿಸುತ್ತಿದ್ದು, ಸಕ್ಕರೆ ಕಾರ್ಖಾನೆ ಆರಂಭದೊಂದಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ಗಳು, ಟ್ರಕ್ಗಳು ಸೇರಿದಂತೆ ಭಾರೀ ವಾಹನಗಳ ಓಡಾಟ ಹೆಚ್ಚಾಗಿದೆ.
ಆದರೆ ಅದಕ್ಕೆ ತಕ್ಕಂತೆ ಸಂಚಾರ ನಿಯಂತ್ರಣ ವ್ಯವಸ್ಥೆ, ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಪಾದಚಾರಿ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ಇನ್ನೂ ಸಮರ್ಕ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.ನಗರದ ರಮೇಶ ಗಡದಣ್ಣವರ ವೃತ್ತ, ಬುದ್ನಿ ಪಿ.ಡಿ.ರಸ್ತೆ ಮಾರ್ಗವಾಗಿ ಕೇಸರಗೊಪ್ಪ ಮಾರ್ಗದ ಕಡೆಗೆ ಸಾಗುವ ರಸ್ತೆಯಲ್ಲಿ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿವೆ.
ಈ ಮಾರ್ಗದಲ್ಲಿ ಜೀಬ್ರಾ ಕ್ರಾಸಿಂಗ್, ವೈಜ್ಞಾನಿಕ ವೇಗ ನಿಯಂತ್ರಕ ಹಂಪ್ಗಳು ಹಾಗೂ ಅಗತ್ಯ ಸೂಚನಾ ಫಲಕಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಇರುವುದರಿಂದ ವಿದ್ಯಾರ್ಥಿಗಳ ಸಂಚಾರವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವೇಗ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ.ಚೆನ್ನಮ್ಮ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಳ
ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಚೆನ್ನಮ್ಮ ವೃತ್ತದಲ್ಲಿ ದೊಡ್ಡ ವಾಹನಗಳು ಪ್ರವೇಶಿಸಿದರೆ ಸಾಕು, ಕೆಲವೇ ನಿಮಿಷಗಳಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ. ವಾಹನಗಳು ಎದುರುಬದುರಾಗಿ ಸಿಲುಕಿಕೊಂಡು ದೀರ್ಘಕಾಲ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇಲ್ಲಿ ಯಾವುದೇ ಸಮರ್ಕ ಗ್ರೀನ್ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನಗಳ ಸಂಚಾರ ನಿಯಂತ್ರಣ ಕಷ್ಟಕರವಾಗಿದೆ.ಗಾಂಧಿ ವೃತ್ತದ ಡಿವೈಡರ್ ಅಪಾಯದ ಸಂಕೇತ!