15 ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಟ ಹಿ ಪುರಸಭೆ ಮುಖ್ಯಾಧಿಕಾರಿ ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಕ್ರಮ
ಲೋಕದರ್ಶನ ವರದಿ
ಮಹಾಲಿಂಗಪುರ 07: ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮಹಾಲಿಂಗಪುರ ನಗರದ ವಿವಿಧ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಅದರಲ್ಲೂ ಪುರಸಭೆಯ 14 ಮತ್ತು 15ನೇ ವಾರ್ಡ್ನ ಕೆಂಗೇರಿಮಡ್ಡಿ ನಿವಾಸಿಗಳು ಕಳೆದ 15 ದಿನಗಳಿಂದ ಸಮರ್ಕ ನೀರು ಪೂರೈಕೆಯಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನೀರಿನ ಸಮಸ್ಯೆಯಿಂದ ಆಕ್ರೋಶಗೊಂಡ ನಿವಾಸಿಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ಗಮನ ಸೆಳೆದರು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿವಾಸಿಗಳು ಮತ್ತೊಮ್ಮೆ ಪ್ರತಿಭಟನೆ ನಡೆಸಿದರು.
ಈ ವೇಳೆ 13ನೇ ವಾರ್ಡ್ನಲ್ಲಿರುವ ಬೋರ್ವೆಲ್ ದುರಸ್ತಿಗೊಳಿಸಿ ಕೆಂಗೇರಿಮಡ್ಡಿ ಭಾಗದ ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಬೋರ್ವೆಲ್ ಅನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ನಿವಾಸಿಗಳ ಅಹವಾಲು ಆಲಿಸಿದ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರು, ಬೇಸಿಗೆಯ ಹಿನ್ನೆಲೆಯಲ್ಲಿ ಕೆಂಗೇರಿಮಡ್ಡಿ ಮಾತ್ರವಲ್ಲದೆ ನಗರದ ಇತರೆ ಭಾಗಗಳಲ್ಲಿಯೂ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ತೊಂದರೆ ನಿವಾರಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅವರ ಸೂಚನೆಯಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ನೀರಿನ ವ್ಯವಸ್ಥೆ ಕಲ್ಪಿಸಿದರು. ಇದರಿಂದ ನಿವಾಸಿಗಳ ಪ್ರತಿಭಟನೆಗೆ ತಕ್ಷಣ ಸ್ಪಂದನೆ ದೊರೆಯಿತು.
ಬೇಸಿಗೆಯಲ್ಲಿ ನಗರದ ಯಾವುದೇ ವಾರ್ಡ್ನ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸಮಸ್ಯೆ ಉಲ್ಬಣಗೊಂಡ ನಂತರ ಕ್ರಮ ಕೈಗೊಳ್ಳುವ ಬದಲು ಮುಂಚಿತವಾಗಿಯೇ ಬೋರ್ವೆಲ್ ದುರಸ್ತಿ, ಪರ್ಯಾಯ ನೀರಿನ ಮೂಲಗಳ ವ್ಯವಸ್ಥೆ ಹಾಗೂ ಸಮರ್ಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ತಾತ್ಕಾಲಿಕ ಪರಿಹಾರಕ್ಕೆ ಸೀಮಿತವಾಗದೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ. ಪ್ರತಿಭಟನೆಯಲ್ಲಿ ತಿಪ್ಪಣ್ಣ ಬಂಡಿವಡ್ಡರ, ಶಂಕರ ಬಟಕಟ, ಕಾಂತು, ವಿಠ್ಠಲ ಅವಟಿ, ಈರ್ಪ ಧರ್ಮಟ್ಟಿ, ಶಂಕರ ಶಿರೋಳ, ಸಂಗಪ್ಪ ಮಡ್ಡೆಣ್ಣವರ, ರಾಜು ನಿಡೋಣಿ ಸೇರಿದಂತೆ ಹಲವು ನಿವಾಸಿಗಳು ಹಾಗೂ ಮಹಿಳೆಯರಾದ ರುಕ್ಮವ್ವ ಚನ್ನಾಳ,
ಸರೋಜಿನಿ ಆರಿ, ಶಾರದಾ ಜಿಡ್ಡಿಮನಿ, ಸಾವಿತ್ರಿ ಹೂಗಾರ, ಕಾವೇರಿ ಬರುಡ, ನಂದಾ ಹುಣಸ್ಯಾಳ, ಗೀತಾ ಗೌಡರ, ನೇತ್ರಾ ಕಡಕೋಳ, ಅನ್ನಪೂರ್ಣ ಚಿಮ್ಮಡ, ಪೂಜಾ ಅಸ್ಕಿ, ಸೀಮಾ ದರೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.