ಉಚಿತ ಕೃತಕ ಕೈ-ಕಾಲು ಅಳತೆ ಶಿಬಿರ; 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ನೆರವು
ಲೋಕದರ್ಶನ ವರದಿ
ಮಹಾಲಿಂಗಪುರ 05 : ಸಮಾಜದಲ್ಲಿ ಸಂಪತ್ತು ಗಳಿಸುವವರು ಹಲವರಿದ್ದಾರೆ. ಆದರೆ ಪರರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವವರು ವಿರಳ. ಅಂತಹ ಮಾನವೀಯ ಕಾಳಜಿ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಬಡವರು ಹಾಗೂ ವಿಕಲಚೇತನರ ಬದುಕಿಗೆ ಆಸರೆಯಾಗುತ್ತಿರುವ ಹುರಕಡ್ಲಿ ಫೌಂಡೇಶನ್ನ ಕಾರ್ಯ ಇತರರಿಗೆ ಮಾದರಿಯಾಗಿದೆ.
ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಹುರಕಡ್ಲಿ ಫೌಂಡೇಶನ್ ಹಾಗೂ ಹುಬ್ಬಳ್ಳಿಯ ಮಹಾವೀರ ಲಿಂಬ್ಸ್ ಸೆಂಟರ್ ಸಹಯೋಗದಲ್ಲಿ ವಿಕಲಚೇತನರಿಗಾಗಿ ಆಯೋಜಿಸಿದ್ದ ಉಚಿತ ಕೃತಕ ಕೈ-ಕಾಲು ಅಳತೆ ಶಿಬಿರಕ್ಕೆ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಹಜಾನಂದ ಸ್ವಾಮೀಜಿ ಮಾತನಾಡಿ, ಫಲಾಪೇಕ್ಷೆಯಿಲ್ಲದೆ ಮಾಡುವ ಸೇವೆ ಎಂದಿಗೂ ಅಜರಾಮರವಾಗಿರುತ್ತದೆ ಎಂದರು.
ಗಿಡಮರಗಳು ತಾವು ಬೆಳೆದ ಹಣ್ಣು-ಹಂಪಲುಗಳನ್ನು ಇತರರಿಗೆ ನೀಡುವಂತೆ, ಮನುಷ್ಯನ ಬದುಕು ಕೂಡ ಸಮಾಜದ ಒಳಿತಿಗಾಗಿ ಮೀಸಲಾಗಿರಬೇಕು. ತಂದೆ-ತಾಯಿಯ ಸ್ಮರಣಾರ್ಥ ನಿರಂತರವಾಗಿ ಬಡವರ ಹಾಗೂ ವಿಕಲಚೇತನರ ಸೇವೆಯಲ್ಲಿ ತೊಡಗಿರುವ ಹುರಕಡ್ಲಿ ಫೌಂಡೇಶನ್ನ ಕಾರ್ಯ ಶ್ಲಾಘನೀಯವಾಗಿದೆ.
ಇಂದಿನ ಯುವಜನತೆ ದುಶ್ಚಟಗಳಿಗೆ ಬಲಿಯಾಗಿ ಹಣ ಮತ್ತು ಸಮಯ ವ್ಯರ್ಥ ಮಾಡುವ ಬದಲು ಇಂತಹ ಸಮಾಜಮುಖಿ ಕಾರ್ಯಗಳಿಂದ ಪ್ರೇರಣೆ ಪಡೆದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.