ಸ್ವಚ್ಛತೆ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣಕ್ಕೆ ರವಿ ಜವಳಗಿ ಗಡುವು; ನ. 10ರೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪುರಸಭೆ ಎದುರು ಧರಣಿ ಸತ್ಯಾಗ್ರಹದ ಎಚ್ಚರಿಕೆ
ಲೋಕದರ್ಶನ ವರದಿ
ಮಹಾಲಿಂಗಪುರ 31 : ಮನುಷ್ಯನ ಬದುಕಿನ ಕೊನೆಯ ಪಯಣಕ್ಕೆ ಗೌರವಯುತ ವಿದಾಯ ನೀಡಬೇಕಾದ ಹಿಂದೂ ರುದ್ರಭೂಮಿಯೇ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿ ಬಯಲು ಶೌಚಾಲಯದಂತಾಗಿರುವುದು ದುರದೃಷ್ಟಕರ. ಸ್ವಚ್ಛತೆ ಮತ್ತು ಮೂಲಸೌಕರ್ಯ ಕಲ್ಪಿಸಬೇಕಾದ ಪುರಸಭೆ ಆಡಳಿತದ ಗಮನಕ್ಕೆ ಹಲವು ಬಾರಿ ತಂದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರುದ್ರಭೂಮಿಯ ದುಸ್ಥಿತಿಗೆ ತೆರೆ ಎಳೆಯಲು ಮಾಜಿ ಪುರಸಭೆ ಸದಸ್ಯ ರವಿ ಜವಳಗಿ ಅವರು ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.
ನಗರದ ಹಿಂದೂ ರುದ್ರಭೂಮಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಾರ್ವಜನಿಕರು ಬಳಸುವ ಸ್ಥಳವು ಬಯಲು ಶೌಚಾಲಯದಂತಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನೀರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಳೆದ ಭಾನುವಾರ ಸ್ವಯಂಪ್ರೇರಿತರಾಗಿ ರುದ್ರಭೂಮಿಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಆದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಸ ಉಳಿದಿರುವುದರಿಂದ ಸಂಪೂರ್ಣ ಸ್ವಚ್ಛತೆಗಾಗಿ ಪುರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.