ಮಹಲಿಂಗಪುರ

ರಸ್ತೆ ಸುರಕ್ಷತೆಗೆ ಸಂಚಾರ ನಿಯಮಗಳ ಪಾಲನೆ ಕಡ್ಡಾಯ: ನ್ಯಾಯಾಧೀಶ ಆಶಪ್ಪ ಸಣಮನಿ

ರಸ್ತೆ ಸುರಕ್ಷತೆಗೆ ಸಂಚಾರ ನಿಯಮಗಳ ಪಾಲನೆ ಕಡ್ಡಾಯ: ನ್ಯಾಯಾಧೀಶ ಆಶಪ್ಪ ಸಣಮನಿ

ಲೋಕದರ್ಶನ ವರದಿ 

             ಮಹಾಲಿಂಗಪುರ 29: ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಂಚಾರ ನಿಯಮಗಳ ಪಾಲನೆ, ಕಾನೂನಿನ ಅರಿವು ಹಾಗೂ ವೈಯಕ್ತಿಕ ಜವಾಬ್ದಾರಿ ಅತ್ಯಗತ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಬಿ. ಸಣಮನಿ ಹೇಳಿದರು.  ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ; ತಾಲೂಕು ಕಾನೂನು ಸೇವಾ ಸಮಿತಿ, ಬನಹಟ್ಟಿ; ವಕೀಲರ ಸಂಘ, ಅಭಿಯೋಜನಾ ಇಲಾಖೆ,

              ಮಹಾಲಿಂಗಪುರ ಪೊಲೀಸ್ ಇಲಾಖೆ ಹಾಗೂ ವಸತಿ ನಿಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನವನ್ನು ಗೌರವಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ, ಪರಿಶ್ರಮದಿಂದ ಜ್ಞಾನ ಸಂಪಾದಿಸಿದಾಗ ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು. 

                   ವಾಹನ ಚಾಲನೆಯಲ್ಲಿ ನಿರ್ಲಕ್ಷ್ಯ ಬೇಡ  ವಿಶೇಷ ಉಪನ್ಯಾಸ ನೀಡಿದ ವಕೀಲ ಎಸ್‌.ಸಿ. ಉಳ್ಳಾಗಡ್ಡಿ ಅವರು, ಆರ್‌ಟಿಒ ಅಧಿಕಾರಿಗಳಿಂದ ವಾಹನಗಳ ಕುರಿತು ಮಾಹಿತಿ ಪಡೆದು, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.  ವಾಹನ ಚಾಲನೆ ಎನ್ನುವುದು ಕೇವಲ ಒಂದು ಕೌಶಲವಲ್ಲ; ಅದು ನಮ್ಮ ಜೀವದ ಜತೆಗೆ ರಸ್ತೆಯಲ್ಲಿ ಸಂಚರಿಸುವ ಇತರರ ಜೀವದ ಹೊಣೆಗಾರಿಕೆಯೂ ಆಗಿದೆ. ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು, ಅತಿವೇಗವಾಗಿ ವಾಹನ ಚಲಾಯಿಸುವುದು ಹಾಗೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಾಯಕಾರಿ. 

                 ವಾಹನ ಚಲಾಯಿಸಲು ಅರ್ಹತೆ ಪಡೆದ ಬಳಿಕ ಅಗತ್ಯ ದಾಖಲೆಗಳನ್ನು ಹೊಂದಿರುವುದು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.  ಕಾನೂನು ಸೇವಾ ಸಮಿತಿಗಳ ಮೂಲಕ ಅರ್ಹರಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ. ಕಾನೂನು ಸಮಸ್ಯೆ ಎದುರಾದಾಗ ಅದರ ಬಗ್ಗೆ ತಿಳಿದುಕೊಂಡು ಸೂಕ್ತ ನೆರವು ಪಡೆಯಬೇಕು. ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದರ ಜತೆಗೆ ತಮ್ಮ ಕುಟುಂಬದವರು ಮತ್ತು ಸ್ನೇಹಿತರಿಗೂ ರಸ್ತೆ ಸುರಕ್ಷತೆಯ ಮಹತ್ವ ತಿಳಿಸಬೇಕು ಎಂದು ಹೇಳಿದರು. 

                ಕುಟುಂಬದ ನೀರೀಕ್ಷೆ ಮರೆಯದಿರಿ  ಪ್ರಧಾನ ದಿವಾಣಿ ನ್ಯಾಯಾಧೀಶೆ ಸೌಮ್ಯ ಹೂಲಿ ಮಾತನಾಡಿ, ರಸ್ತೆಗೆ ವಾಹನ ತೆಗೆದುಕೊಂಡು ಬರುವ ಪ್ರತಿಯೊಬ್ಬರಿಗೂ ಮನೆಯಲ್ಲಿ ಕಾಯುವ ಕುಟುಂಬವಿರುತ್ತದೆ. ನಮ್ಮ ಒಂದು ಕ್ಷಣದ ನಿರ್ಲಕ್ಷ್ಯ ಮತ್ತೊಂದು ಕುಟುಂಬದ ಬದುಕನ್ನೇ ಕತ್ತಲೆಗೆ ತಳ್ಳಬಹುದು. ಆದ್ದರಿಂದ ಯುವಕರು ದುಡುಕಿನ ನಿರ್ಧಾರಗಳಿಂದ ದೂರವಿದ್ದು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳು ತಾವು ಜಾಗೃತರಾಗುವುದರ ಜತೆಗೆ ಇತರರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು. 

             ಕಾರ್ಯಕ್ರಮದಲ್ಲಿ ಬನಹಟ್ಟಿ ವಕೀಲರ ಸಂಘದ ಕಾರ್ಯದರ್ಶಿ ಆರ್‌.ಎಸ್‌. ಸಂಪಗಾಂವಿ, ಮಹಾಲಿಂಗಪುರ ಪೊಲೀಸ್ ಠಾಣೆಯ ಎಎಸ್‌ಐ ವೈ.ಬಿ. ಗೋಸರವಾಡ ಸೇರಿದಂತೆ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು. ವಕೀಲರಾದ ಸುರೇಶ ಮಡಿವಾಳರ, ಎಂ.ವೈ. ಪಾಟೀಲ, ಸಂಜು ಶಿರೋಳ, ಶಿವಾನಂದ ಹುಣಸ್ಯಾಳ, ಹಣಮಂತ ನಾವಿ, ರಾಮು ಪಾತ್ರೋಟ, ನಾಗರಾಜ ಹ್ಯಾಗಾಡಿ ಹಾಗೂ ಪ್ರಸನ್ನಕುಮಾರ ಬಾನಕಾರ ಭಾಗವಹಿಸಿದ್ದರು. 


ಸುದ್ದಿ ಓದಿ