ಮಹಾಲಿಂಗಪುರದಲ್ಲಿ ಶ್ರೀದೇವಿ ಪುರಾಣ ಪ್ರವಚನ
ಲೋಕದರ್ಶನ ವರದಿ
ಮಹಾಲಿಂಗಪುರ 17: ಬಾಗಿದ ತಲೆ ಮುಗಿದ ಕೈ ಇರುವ ಹಾಗೇ ನನ್ನನ್ನು ಇರಿಸು ತಂದೆ ಎಂದು ಬಸವೇಶ್ವರರು ಕೂಡಲ ಸಂಗಮನಲ್ಲಿ ಬೇಡಿಕೊಳ್ಳುತ್ತಾರೆ. ಇದರ ಅರ್ಥ ಅಹಂಕಾರದ ನೆರಳು ಕೂಡಾ ನನ್ನ ಮೇಲೆ ಬೀಳದಿರಲಿ ಎಂಬುದಾಗಿದೆ. ಈ ಕಾರಣಕ್ಕಾಗಿಯೇ ಅವರು ವಿಶ್ವಗುರು ಜಗಜ್ಯೋತಿಯಾಗಿ ಬೆಳಗಿದರು ಎಂದು ವಿಜಯಪುರದ ರಾಮಕೃಷ್ಣದೇವರು ಹೇಳಿದರು.
ಪಟ್ಟಣದ ನೀಲಕಂಠೇಶ್ವರ ಮಠದಲ್ಲಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ನವರಾತ್ರಿ ನಿಮಿತ್ತ ಶುಕ್ರವಾರ ಸಂಜೆ ಜರುಗಿದ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು ನಾ ನನ್ನಿಂದ ಎಂಬ ಅಹಂಕಾರವೇ ಸರ್ವನಾಶದ ಮುನ್ನುಡಿ. ದೇವತೆಗಳಿಗೆ ತೊಂದರೆ ನೀಡುತ್ತಿದ್ದ ಮಹಿಷಾಸುರನ ಶಿಷ್ಯ ಬಿಡಾಲ ಶ್ರೀದೇವಿಯ ಮೇಲೆ ಯುದ್ಧ ಸಾರಿ ದೇವಿಯ ದೇಹ ಗಾಯಗೊಳಿಸಿದಾಗ ದೇವಿಗೆ ಸೋಲಾಗುತ್ತದೆ ಎಂದು ಹೆದರಿ ದೇವತೆಗಳು ಅಲ್ಲಿಂದ ಓಟಕ್ಕಿತ್ತರು. ಆದರೆ ದೇವಿ ತನ್ನ ಗದೆಯಿಂದ ಬಿಡಾಲನ ತಲೆ ಸೀಳಿದಾಗ ಆತ ಮೃತನಾದ.
ಇದರಿಂದ ರೊಚ್ಚಿಗೆದ್ದ ಮಹಿಷಾಸುರ ದೇವಿಯ ಕತೆ ಮುಗಿಸಿಬಿಡುತ್ತೇನೆ ಎಂದು ಅರ್ಭಟಿಸುತ್ತಾ ಬರುತ್ತಾನೆ. ಮಹಿಷಾಸುರ ತನ್ನ ತಪಸ್ಸಿನಿಂದ ಅಪಾರ ಶಕ್ತಿ ಪಡೆದುಕೊಂಡಿದ್ದರೂ ಅಹಂಕಾರ ಮತ್ತು ಅಧರ್ಮದ ಮಾರ್ಗ ಅನುಸರಿಸಿದ ಕಾರಣ ಶ್ರೀದೇವಿಯ ಕೆಂಗಣ್ಣಿಗೆ ಗುರಿಯಾಗುತ್ತಾನೆ. ದೇವಿ ಆತನನ್ನು ತನ್ನ ತ್ರಿಶೂಲದಿಂದ ಸಂಹಾರ ಮಾಡುತ್ತಾಳೆ. ಈ ಕಾರಣದಿಂದಲೇ ಅವಳನ್ನು ಮಹಿಷಾಸುರ ಮರ್ಧಿನಿ ಎಂದು ಕರೆಯುತ್ತಾರೆ.
ಮಹಿಷಾಸುರನ ವಧೆ ಮಾಡಿದ ತಾಯಿ ದೇವಿಯ ಕಾರ್ಯಕ್ಕೆ ದೇವಾನುದೇವತೆಗಳು ತಾಯಿಗೆ ಜಯಕಾರ ಹಾಕಿ ಹೂಮಳೆಗರೆದರು. ರಾಕ್ಷಸರಿಂದ ಎಲ್ಲವನ್ನು ಕಳೆದುಕೊಂಡಿದ್ದ ನಾವು ನಿನ್ನಿಂದ ಮರಳಿ ಪಡೆಯುವಂತಾಯಿತು ಎಂದು ಶ್ರೀದೇವಿಗೆ ಜಯಕಾರ ಹಾಕಿದರು. ದೇವಿ ಚರಿತ್ರೆ ಬೇರೆನೂ ಅಲ್ಲ ಈ ಕಷ್ಟವಾದ ಭವಸಾಗರವನ್ನು ಈ ಸಂಸಾರದ ಈ ಕಟುವೃಕ್ಷವನ್ನು ಹೇಗೆ ದಾಟಬೇಕೆಂಬ ನಿರಂತರ ಚರಿತ್ರೆ ಎಂದು ಶ್ರೀಗಳು ತಮ್ಮ ಪ್ರವಚನದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬಲಾಯಿತಲ್ಲದೇ ಕುಂಕುಮಾರ್ಚನೆ ಕಾರ್ಯಕ್ರಮ ಕೂಡಾ ಜರುಗಿತು. ಶನಿವಾರ ಮುಂಜಾನೆ ಜರುಗಿದ ಮಕ್ಕಳ ಸಂಸ್ಕಾರ ಶಿಬಿರದಲ್ಲಿ ಸುಮಾರು 350 ಕ್ಕೂ ಹೆಚ್ಚು ಮಕ್ಕಳಿಗೆ ಏಕಕಾಲಕ್ಕೆ ಹನುಮಾನ ಚಾಲಿಸಾ ಪಠಣ ಮಾಡಿಸಲಾಯಿತಲ್ಲದೆ ಬಸವರಾಜ ಜಮಕಂಡಿ ಇವರು ಹನುಮಾನ ಚಾಲಿಸಾ ಪುಸ್ತಕವನ್ನು ಉಚಿತವಾಗಿ ಮಕ್ಕಳಿಗೆ ನೀಡಿದರು.
ಈ ಸಂದರ್ಭದಲ್ಲಿ ಗಣ್ಯರಾದ ಶಂಕರ ಯಾದವಾಡ, ಶ್ರೀಶೈಲ ಕೋಟಿ, ಮಲ್ಲೇಶಪ್ಪ ಹುಣಶ್ಯಾಳ, ಶ್ರೀಶೈಲ ಕುಕ್ಕುಗೋಳ, ಬಸವರಾಜ ಹೊಸಕೋಟಿ, ಹೊಳೆಪ್ಪ ಬಾಡಗಿ, ರವಿ ಮುಂಡಗನೂರ, ರಾಜೇಂದ್ರ ಮಿರ್ಜಿ, ಸದಾಶಿವ ಬರಗಿ, ಬಸವರಾಜ ಗೋಲಭಾಂವಿ, ಈರ್ಪ ಜಿಡ್ಡಿಮನಿ, ರಾಜು ಮೂಡಲಗಿ, ಅಡಿವೆಪ್ಪ ಹುಣಶ್ಯಾಳ, ಪ್ರಕಾಶ ಬಲಕುಂದಿ, ಶ್ರೀಕಾಂತ ಹಟ್ಟಿ ಮುಂತಾದವರು ಇದ್ದರು.