ಮಹಲಿಂಗಪುರ

ರೈತರ ಧರಣಿಗೆ ಸ್ಪಂದಿಸಿದ ಹೆಸ್ಕಾಂ; ವಿದ್ಯುತ್ ಪೂರೈಕೆಗೆ ಅಧಿಕಾರಿಗಳ ಭರವಸೆ

ರೈತರ ಧರಣಿಗೆ ಸ್ಪಂದಿಸಿದ ಹೆಸ್ಕಾಂ; ವಿದ್ಯುತ್ ಪೂರೈಕೆಗೆ ಅಧಿಕಾರಿಗಳ ಭರವಸೆ

ಲೋಕದರ್ಶನ ವರದಿ 

ಮಹಾಲಿಂಗಪುರ 09 : ಮಳೆ ಕೈಕೊಟ್ಟರೆ ನೀರಿಗಾಗಿ ಪರದಾಟ, ಬೆಳೆ ಬೆಳೆಸಲು ಸಾಲದ ಹೊರೆ, ಇವೆಲ್ಲದರ ನಡುವೆ ಹೊಲಕ್ಕೆ ನೀರುಣಿಸಲು ಸಮರ​‍್ಕ ವಿದ್ಯುತ್‌ಗಾಗಿ ಅಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಬೇಕಾದ ಅನಿವಾರ್ಯತೆ ರೈತರನ್ನು ಕಾಡುತ್ತಿದೆ. ಅನ್ನದಾತನ ಬೆವರಿಗೆ ತಕ್ಕ ಬೆಲೆ ಸಿಗುವ ಮುನ್ನ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿರುವ ಸಂದರ್ಭದಲ್ಲಿ, ಕೃಷಿ ಚಟುವಟಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ರೈತರು ಶುಕ್ರವಾರ ಮಹಾಲಿಂಗಪುರದ ಹೆಸ್ಕಾಂ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. 

ಕೃಷಿ ಪಂಪ್‌ಸೆಟ್‌ಗಳಿಗೆ ಸಮರ​‍್ಕ ವಿದ್ಯುತ್ ದೊರೆಯದಿದ್ದರೆ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರುಣಿಸುವುದು ಕಷ್ಟ. ವಿದ್ಯುತ್‌ಗಾಗಿ ಕಾಯುತ್ತಾ ದಿನ ಕಳೆಯುವ ಪರಿಸ್ಥಿತಿ ಎದುರಾಗಬಾರದು ಎಂಬ ಉದ್ದೇಶದಿಂದ ರೈತರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಹಗಲು ಹೊತ್ತಿನಲ್ಲಿ ಏಳು ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಪೂರೈಕೆ ಮಾಡಬೇಕು ಹಾಗೂ ಸಂಜೆ 6.30ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ನಿರಂತರವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು. 

ರೈತರ ಅಹವಾಲು ಆಲಿಸಿದ ಅಧಿಕಾರಿಗಳು 

ರೈತರ ಧರಣಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಮಖಂಡಿ ವಿಭಾಗದ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಂತೇಶ ಚನಗೊಂಡ ಅವರು ಸ್ಥಳೀಯ ಅಧಿಕಾರಿಗಳಿಂದ ವಿದ್ಯುತ್ ಪೂರೈಕೆ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು. ಬಳಿಕ ರೈತರೊಂದಿಗೆ ಮಾತನಾಡಿ, ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಮಾಡಲಾಗುವುದು.  

ರಾತ್ರಿ ವಿದ್ಯುತ್ ದುರುಪಯೋಗವಾಗದಿರಲಿ : ರಾತ್ರಿ ಸಮಯದಲ್ಲಿ ಒದಗಿಸುವ ವಿದ್ಯುತ್ ಅನ್ನು ಮನೆಗಳ ದೈನಂದಿನ ಬಳಕೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ನೀಡಲಾಗುತ್ತಿದೆ. ಈ ಸಮಯದಲ್ಲಿ ಕೃಷಿ ಮೋಟರ್‌ಗಳನ್ನು ಚಾಲನೆ ಮಾಡುವುದರಿಂದ ವಿದ್ಯುತ್ ಬಳಕೆಯಲ್ಲಿ ವ್ಯತ್ಯಯ ಉಂಟಾಗಿ ಟ್ರಿಪ್ಪಿಂಗ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ರಾತ್ರಿ ಪೂರೈಕೆಯಾಗುವ ವಿದ್ಯುತ್ ಅನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಇಇ ಮಹಾಂತೇಶ ಚನಗೊಂಡ ರೈತರಿಗೆ ತಿಳಿಸಿದರು.  


ಸುದ್ದಿ ಓದಿ