ಮಹಲಿಂಗಪುರ

ಅಧಿಕಾರಿಗಳೇ ಜಾಲಕ್ಕೆ: ಭ್ರೂಣ ಲಿಂಗ ಪತ್ತೆ ಪ್ರಕರಣ ಬಯಲು

ಅಧಿಕಾರಿಗಳೇ ಜಾಲಕ್ಕೆ: ಭ್ರೂಣ ಲಿಂಗ ಪತ್ತೆ ಪ್ರಕರಣ ಬಯಲು

ಲೋಕದರ್ಶನ ವರದಿ 


ಮಹಾಲಿಂಗಪುರ 06: ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಮಾಡಿ, ಹಣಕ್ಕಾಗಿ ಅಕ್ರಮ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಹಿಮಹಾರಾಷ್ಟ್ರ ಗಡಿ ಭಾಗದಲ್ಲಿ ಆರೋಗ್ಯ ಹಾಗೂ ಆಡಳಿತ ಇಲಾಖೆ ಅಧಿಕಾರಿಗಳು ನಡೆಸಿದ ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಭ್ರೂಣ ಲಿಂಗ ಪತ್ತೆ ಜಾಲವೊಂದು ಬೆಳಕಿಗೆ ಬಂದಿದೆ.  ಅಧಿಕಾರಿಗಳೇ ಗ್ರಾಹಕರ ಸೋಗಿನಲ್ಲಿ ದಂಧೆಯೊಳಗೆ ಪ್ರವೇಶಿಸಿ, ಗರ್ಭಿಣಿ ಮಹಿಳೆಯಾಗಿ ನಟಿಸಿ ಮಾಹಿತಿ ಸಂಗ್ರಹಿಸಿದ ಬಳಿಕ ಮಹಾರಾಷ್ಟ್ರದ ಜತ್ ತಾಲೂಕಿನ ಚಾದರ ಬಬಾಲಾದಿ ಹಾಗೂ ಕರ್ಜಿ ಗ್ರಾಮಗಳಲ್ಲಿ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಬಳಸುತ್ತಿದ್ದ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರ ಸೇರಿದಂತೆ ವೈದ್ಯಕೀಯ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.  ಬಾಗಲಕೋಟೆ ಜಿಲ್ಲೆ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಭ್ರೂಣದ ಲಿಂಗ ಪತ್ತೆ ಹಾಗೂ ಅಕ್ರಮ ಗರ್ಭಪಾತಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡವು ನೇರವಾಗಿ ದಾಳಿ ನಡೆಸುವ ಬದಲು, ಮೊದಲು ಗ್ರಾಹಕರ ಸೋಗಿನಲ್ಲಿ ಸಂಪರ್ಕ ಸಾಧಿಸಿ ಜಾಲದ ಕಾರ್ಯವಿಧಾನ ಹಾಗೂ ಸಂಬಂಧಿತ ವ್ಯಕ್ತಿಗಳ ಕುರಿತು ಮಾಹಿತಿ ಕಲೆಹಾಕಿದೆ ಎನ್ನಲಾಗಿದೆ. ನಂತರ ಗರ್ಭಿಣಿ ಮಹಿಳೆಯ ಸೋಗಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಮಹಾರಾಷ್ಟ್ರ ಗಡಿ ಭಾಗದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪೋರ್ಟಬಲ್ ಸ್ಕ್ಯಾನಿಂಗ್ ಯಂತ್ರ ಹಾಗೂ ಸಂಬಂಧಿತ ಪರಿಕರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ. 


ಸುದ್ದಿ ಓದಿ