ಲೇಖಕ ರವಿ ಹಂಜ ಕೃತಿಗೆ ವಿರೋಧ, ಸೂಕ್ತ ಕಾನೂನು ಕ್ರಮಕ್ಕೆ ಬಸವ ಭಕ್ತರ ಆಗ್ರಹ
ಲೋಕದರ್ಶನ ವರದಿ
ಮಹಾಲಿಂಗಪುರ 27 : ಲೇಖಕ ರವಿ ಹಂಜ ತಮ್ಮ ಕೃತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಬಸವಣ್ಣನವರ ಬಗ್ಗೆ ಆಕ್ಷೇಪಾರ್ಹ ಅಂಶಗಳನ್ನು ಬರೆದಿದ್ದಾರೆ, ಇದು ಖಂಡನೀಯ ಮತ್ತು ಆತನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಪಟ್ಟಣದ ಬಸವ ಭಕ್ತರು ಶುಕ್ರವಾರ ಪುರಸಭೆಗೆ ಮನವಿ ಸಲ್ಲಿಸಿದರು.
ಪುರಸಭೆ ವ್ಯವಸ್ಥಾಪಕರಾದ ಎಸ್. ಎನ್. ಪಾಟೀಲ್ ಮನವಿ ಸ್ವೀಕರಿಸಿ,ಬಸವ ಸಮಿತಿ, ಬಸವ ಬಳಗ, ಎಪಿಎಂಸಿ ದಲಾಲ ವರ್ತಕರ ಸಂಘದವರು ನೀಡಿದ ಮನವಿಯನ್ನು ಜಿಲ್ಲಾಡಳಿತಕ್ಕೆ ರವಾನಿಸಲಾಗುತ್ತದೆ ಎಂದರು.
ವಿವಾದಿತ ಲೇಖಕ ಮೂಲತಃ ದಾವಣಗೆರೆಯವರು. ಈಗ ಅಮೇರಿಕಾದ ಶಿಕ್ಯಾಗೋದಲ್ಲಿ ನೆಲೆಸಿದ್ದಾರೆ.ಇವರು ಲೇಖಕ ಮತ್ತು ಅಂಕಣಕಾರರಾಗಿದ್ದು, ನವೆಂಬರ 15 ರಂದು ಹೊರ ತಂದಿರುವ ತಮ್ಮ 'ಬಸವ ಮಂಟಪ' ಕೃತಿಯಲ್ಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಅಂಶ ಬರೆದಿರುವುದನ್ನು ಮನಗಂಡ ಬಸವ ಅನುಯಾಯಿಗಳಿಂದ ರಾಜ್ಯಾದ್ಯಂತ ಕೃತಿ ವಿರುದ್ಧ ಪ್ರತಿಭಟನೆ ಜೋರಾಗಿ ನಡೆದಿರುವುದನ್ನು ನಾವು ಕಾಣಬಹುದು.
ಸದರಿ ವಿಷಯದ ಕುರಿತು ಎಲ್ಲೆಡೆ ಲಿಂಗಾಯತ ವರ್ಗದ ಪ್ರತಿಭಟನೆ ಕಾವೇರುತ್ತಿದ್ದಂತೆ, ಸರ್ಕಾರ ವಿವಾದಿತ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ ಕ್ರಮ. ಆದರೂ ಆತನನ್ನು ಬಂಧಿಸಿ, ಉಗ್ರ ಶಿಕ್ಷೆಯಾಗುವಂತೆ ನೋಡಿಕ್ಕೊಳ್ಳಬೇಕೆಂದು ಸರ್ಕಾರವನ್ನು ಈ ಮೂಲಕ ಆಗ್ರಹಪಡಿಸಿದ್ದಾರೆ.
ಈ ಮನವಿ ಸಲ್ಲಿಕೆಯಲ್ಲಿ, ಬಸವ ಬಳಗದ ಚಂದ್ರಶೇಖರ ಗೊಂದಿ, ಸಂಗಪ್ಪ ಹಲ್ಲಿ, ಶೇಖರ ಅಂಗಡಿ, ಗಂಗಾಧರ ಮೇಟಿ,ಶ್ರೀಶೈಲಪ್ಪ ಉಳ್ಳೆಗಡ್ಡಿ, ಬಸವರಾಜ ಮೇಟಿ, ಬಸವರಾಜ ಬಟಕುರ್ಕಿ, ಬಸವರಾಜ ಹಡಪದ,ಕರೆಪ್ಪ ಮಾದಪ್ಪನ್ನವರ,ಗೋಲೇಶ ಅಮ್ಮನಗಿ, ಶ್ರೀಶೈಲಪ್ಪ ನುಚ್ಚಿ, ಬಸವರಾಜ ಪಾಶ್ಚಾಪೂರ, ಮಹಾಲಿಂಗಪ್ಪ ಜಕ್ಕನ್ನವರ, ರಾಜಶೇಖರ ಜಮಖಂಡಿ ಇನ್ನೂ ಮುಂತಾದವರಿದ್ದರು.