ಶಿರಹಟ್ಟಿ

ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿದಾರರ ಹಕ್ಕಿಗಾಗಿ ಬೆಳಗಾವಿ ಚಲೋ: ರವಿಕಾಂತ ಅಂಗಡಿ

ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿದಾರರ ಹಕ್ಕಿಗಾಗಿ ಬೆಳಗಾವಿ ಚಲೋ: ರವಿಕಾಂತ ಅಂಗಡಿ

              ಶಿರಹಟ್ಟಿ 27 :  ಅರಣ್ಯಭೂಮಿ, ಬಗರ್ ಹುಕುಂ ಹಾಗೂ ಹುಲ್ಲುಗಾವಲು ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳುವ ಕುರಿತು ಶುಕ್ರವಾರ ಶಿರಹಟ್ಟಿಯ ನೀರೀಕ್ಷಣಾ ಮಂದಿರದಲ್ಲಿ ಸಭೆ ನಡೆಯಿತು.

            ಸಭೆಯಲ್ಲಿ ಉತ್ತರ ಕರ್ನಾಟಕ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಕೀಲ ರವಿಕಾಂತ ಅಂಗಡಿ ಮಾತನಾಡಿ, “ತಲೆತಲಾಂತರಗಳಿಂದ ಅರಣ್ಯಭೂಮಿ ಮತ್ತು ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ಮಹಾಸಭಾ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದೆ.

               ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರು 23 ದಿನಗಳ ಧರಣಿ ನಡೆಸಿದ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರು ರೈತರ ಮನೆ ಬಾಗಿಲಿಗೆ ಬಂದು ಅರ್ಜಿ ಸ್ವೀಕರಿಸುವ ಭರವಸೆ ನೀಡಿದ್ದರು. ಆದರೆ ಕೆಲವೇ ಗ್ರಾಮಗಳಲ್ಲಿ ಮಾತ್ರ ಅರ್ಜಿ ಸ್ವೀಕಾರ ಕಾರ್ಯ ನಡೆದಿದ್ದು, ಜಿಲ್ಲೆಯಾದ್ಯಂತ ಅನುಷ್ಠಾನಗೊಂಡಿಲ್ಲ.

               ಸರ್ಕಾರ ಕೂಡಲೇ ಬಾಕಿ ಅರ್ಜಿಗಳನ್ನು ಸ್ವೀಕರಿಸಿ ಮರುಪರೀಶೀಲನೆ ನಡೆಸಿ ಅರ್ಹ ರೈತರಿಗೆ ಹಕ್ಕುಪತ್ರ ವಿತರಿಸಬೇಕು. ಅರಣ್ಯ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಅರಣ್ಯ ಉಳುಮೆದಾರರು ಮತ್ತು ಬಗರ್ ಹುಕುಂ ಸಾಗುವಳಿದಾರರಿಗೆ ಬರ ಪರಿಹಾರ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಸಾಲ ಸೌಲಭ್ಯ ಒದಗಿಸಬೇಕು.  

                  ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಗ್ರಾಮೀಣ ಉದ್ಯೋಗ ಸೃಷ್ಟಿ, ವಿಬಿ-ಜಿ ರಾಮ್ಜಿ ಯೋಜನೆಯ ಸಮರ​‍್ಕ ಅನುಷ್ಠಾನ ಹಾಗೂ ಗೋಶಾಲೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಚಲೋ ಹೋರಾಟ ನಡೆಸಲಾಗುವುದು,” ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಂಜುನಾಥ ಅರಪಲ್ಲಿ, ಎನ್‌.ಟಿ. ಪೂಜಾರ, ನಾಮದೇವ ಸೇರಿದಂತೆ ಜಿಲ್ಲೆಯ ವಿವಿಧ ರೈತ ಮುಖಂಡರು, ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ