ಕನಕದಾಸರ ತತ್ವಾದರ್ಶಗಳು ಇಂದಿನ ಸಮಾಜಕ್ಕೂ ದಾರೀದೀಪ: ಉಪಸಭಾಪತಿ ಉಮಾಶ್ರೀ
ಲೋಕದರ್ಶನ ವರದಿ
ಮಹಾಲಿಂಗಪುರ 27 : ಭಕ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವಾದರ್ಶಗಳು ಇಂದಿನ ಸಮಾಜಕ್ಕೂ ದಾರೀದೀಪವಾಗಿವೆ ಎಂದು ವಿಧಾನಪರಿಷತ್ ಉಪಸಭಾಪತಿ ಶ್ರೀಮತಿ ಉಮಾಶ್ರೀ ಹೇಳಿದರು.
ನಗರದ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಭಕ್ತ ಕನಕದಾಸರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡಿನ ಖ್ಯಾತ ಕೀರ್ತನಕಾರರಾದ ಕನಕದಾಸರು, ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತ ಹಾಗೂ ಕೀರ್ತನ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಧಾಟಿಯಲ್ಲಿ ಮೂಲಭೂತ ಸಿದ್ಧಾಂತಗಳ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ.
ತಮ್ಮ ಕೀರ್ತನೆಗಳ ಮೂಲಕ ಭಕ್ತಿ ಸಾರದ ಜೊತೆಗೆ ಸಾಮಾಜಿಕ ಸಮಾನತೆ, ಮಾನವೀಯತೆ ಹಾಗೂ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಂತರು. ಅವರ ಸಾಹಿತ್ಯ ಮತ್ತು ಆದರ್ಶಗಳು ಸದಾ ಸ್ಮರಣೀಯವಾಗಿದ್ದು, ಮಾನವ ಕುಲಕ್ಕೆ ಸದಾ ಮಾರ್ಗದರ್ಶನ ನೀಡುತ್ತವೆ ಎಂದರು. ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಒಳಿತಾಗಲಿ ಎಂದು ಹಾರೈಸಿದರು.
ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಒಂದು ಕಾಲದಲ್ಲಿ ಕೆಲವೇ ಮೇಲ್ವರ್ಗದವರ ಸ್ವತ್ತಾಗಿದ್ದ ಭಕ್ತಿ ಭಾವನೆ ಎಲ್ಲ ವರ್ಗದ ಜನರಲ್ಲಿಯೂ ಮೂಡಬೇಕು ಎಂಬ ಆಶಯದೊಂದಿಗೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾನತೆಯ ಸಂದೇಶ ಸಾರಿದರು. ಜಾತಿ, ವರ್ಗಗಳ ಭೇದಭಾವವನ್ನು ಮೀರಿ ಮಾನವೀಯತೆಯ ಮೌಲ್ಯಗಳನ್ನು ಬಿತ್ತಿದ ಅವರು ದಾಸಶ್ರೇಷ್ಠರಾಗಿ ಗುರುತಿಸಿಕೊಂಡಿದ್ದಾರೆ. ಅವರ ವಿಚಾರಧಾರೆಗಳು ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಅರ್ಿಸಲಾಯಿತು. ಜಯಂತಿಯ ಅಂಗವಾಗಿ ಸಮಾಜದ ಬಾಂಧವರು ಭಕ್ತ ಕನಕದಾಸರ ಕೊರಳಪಟ್ಟಿ ಹಾಗೂ ಪಂಗಡದ ಅರಿಶಿಣ ಬಣ್ಣದ ಟವೆಲ್ಗಳನ್ನು ಧರಿಸಿ ಸಂಭ್ರಮದಲ್ಲಿ ಪಾಲ್ಗೊಂಡರು. ನಂತರ ಉಪಸಭಾಪತಿ ಶ್ರೀಮತಿ ಉಮಾಶ್ರೀ ಹಾಗೂ ಮುಖಂಡ ಸಿದ್ದು ಕೊಣ್ಣೂರ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಬಸನಗೌಡ ಪಾಟೀಲ, ಯಲ್ಲನ್ನಗೌಡ ಪಾಟೀಲ, ರಂಗನಗೌಡ ಪಾಟೀಲ, ವಿಠ್ಠಲ ಸಂಶಿ, ವಿದ್ಯಾಧರ ಸವದಿ, ಸಂಗಪ್ಪ ಹಲ್ಲಿ, ಶಂಕರಗೌಡ ಪಾಟೀಲ, ಮುಸ್ತಾಕ್ ಚಿಕ್ಕೋಡಿ, ಅಶೋಕಗೌಡ ಪಾಟೀಲ, ಗಂಗಾಧರ ಮೇಟಿ, ನಜೀರ ಝಾರೆ, ಬಲವಂತಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಸನದಿ, ಜ್ಯೋತೆಪ್ಪ ಕಪರಟ್ಟಿ, ವಿಠ್ಠಲ ಢವಳೇಶ್ವರ, ವಿಠ್ಠಲ ಹೊಸಮನಿ ಸೇರಿದಂತೆ ಅನೇಕ ಮುಖಂಡರು, ಸಮಾಜದ ಬಾಂಧವರು ಹಾಗೂ ಭಕ್ತರು ಉಪಸ್ಥಿತರಿದ್ದರು.