ಮಹಲಿಂಗಪುರ

ಆಹಾರವೇ ಓಷಧವಾಗಲಿ, ಓಷಧವೇ ಆಹಾರವಾಗದಿರಲಿ: ಎಸ್‌.ಬಿ. ವಿರಕ್ತಮಠ

ಆಹಾರವೇ ಓಷಧವಾಗಲಿ, ಓಷಧವೇ ಆಹಾರವಾಗದಿರಲಿ: ಎಸ್‌.ಬಿ. ವಿರಕ್ತಮಠ

ಲೋಕದರ್ಶನ ವರದಿ 

            ಮಹಾಲಿಂಗಪುರ 27: ನಗರದ ಬುದ್ನಿ ಪಿ.ಡಿ. ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧ ವಾರ ದಂದು ಅಗ್ನಿರಹಿತ ಆಹಾರ ತಯಾರಿಕೆ ಸ್ಪರ್ಧೆ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಎಸ್‌ಡಿಎಂಸಿ ಅಧ್ಯಕ್ಷ ಸೈಯದಸಾಬ ರಬಕವಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಪೋಷಕಾಂಶಗಳ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಿರುವ ಅಗ್ನಿರಹಿತ ಆಹಾರ ತಯಾರಿಕೆ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಪೌಷ್ಟಿಕ ಆಹಾರದ ಮಹತ್ವ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಆಹಾರವೇ ಆರೋಗ್ಯಕರ ಜೀವನಕ್ಕೆ ಆಧಾರ ಎಂಬ ಸಂದೇಶ ಸಾರುತ್ತಿದೆ ಎಂದರು. 

         ಹಿರಿಯ ಶಿಕ್ಷಕಿ ಎಸ್‌.ಬಿ. ವಿರಕ್ತಮಠ ಮಾತನಾಡಿ, “ಆಹಾರವೇ ಓಷಧವಾಗಲಿ, ಓಷಧವೇ ಆಹಾರವಾಗದಿರಲಿ” ಎಂಬಂತೆ ಪ್ರತಿಯೊಬ್ಬರೂ ಪೌಷ್ಟಿಕಾಂಶಯುಕ್ತ, ಸಮತೋಲಿತ ಹಾಗೂ ನೈಸರ್ಗಿಕ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹಣ್ಣು, ತರಕಾರಿ, ಸೊಪ್ಪು, ಸಿರಿಧಾನ್ಯಗಳು ಹಾಗೂ ಪ್ರೋಟೀನ್‌ಯುಕ್ತ ಆಹಾರ ದೇಹಕ್ಕೆ ಅಗತ್ಯವಾದ ಶಕ್ತಿ ಒದಗಿಸುತ್ತವೆ. ಸಮಯಕ್ಕೆ ಸರಿಯಾಗಿ ಮಿತವಾದ ಆಹಾರ ಸೇವನೆ, ಶುದ್ಧ ನೀರಿನ ಬಳಕೆ ಮತ್ತು ಆಹಾರದಲ್ಲಿ ಶಿಸ್ತು ಪಾಲಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯಕರ ಆಹಾರವು ರೋಗನಿರೋಧಕ ಶಕ್ತಿ ಹೆಚ್ಚಿಸಿ ಸದೃಢ ದೇಹ ಹಾಗೂ ನೆಮ್ಮದಿಯ ಜೀವನಕ್ಕೆ ಅಡಿಪಾಯವಾಗುತ್ತದೆ ಎಂದು ಹೇಳಿದರು. 

              ಮುಖ್ಯ ಶಿಕ್ಷಕಿ ಜಿ.ಜಿ. ವೆರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಸ್ವಾಗತಿಸಿದರು. ಸ್ಪರ್ಧೆಯಲ್ಲಿ ವಿಜೇತ ಹಾಗೂ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ವಿತರಿಸಲಾಯಿತು. 

ಶಿಕ್ಷಕಿ ಜಿ.ಆರ್‌. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್‌.ಸಿ. ಪೂಜಾರಿ, ಎನ್‌.ಎಸ್‌. ಪಾಟೀಲ, ಎ.ಎ. ಕಿಚಡಿ, ಚಿಂದಾನಂದ ಹಳ್ಳಿ, ಪಾರ್ವತಿ ಕಂಬಿ, ಎ.ಎಂ. ಮುಲ್ಲಾ, ಎ.ಎಂ. ಬಡಿಗಣಿ, ಎಸ್‌.ಎಲ್‌. ಪಠಾಣ, ಪಿ.ಎಂ. ಇಟ್ನಾಳ, ಮಹಾನಂದ ದಿವಾನ, ರಾಘವೇಂದ್ರ ನೀಲಣ್ಣವರ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ