ಪತ್ರಕರ್ತರಿಗೆ ಸಾಮಾಜಿಕ ಕಳಕಳಿ, ನೈತಿಕತೆ ಇರಲಿ: ಮಲ್ಲಿಕಾರ್ಜುನ ಹೆಗ್ಗಳಗಿ
ಲೋಕದರ್ಶನ ವರದಿ
ಮಹಾಲಿಂಗಪುರ 09 : ಸಮಾಜದ ನೋವು ಅವಮಾನಗಳಿಗೆ ಸ್ಪಂದಿಸುವ ಗುಣ ಪತ್ರಕರ್ತನಿಗೆ ಇರಬೇಕು, ಉತ್ಪಾದನಾ ಬೆಲೆಗಿಂತ ಅಂದರೆ ಒಂದು ಪತ್ರಿಕೆ ಸಿದ್ಧವಾಗಲು 22 ರೂ.ಖರ್ಚಾಗುತ್ತದೆ, ಅದನ್ನು ಗ್ರಾಹಕನಿಗೆ 5ರೂ.ಗೆ ಇಡೀ ತಿಂಗಳು ಉದ್ರಿ ಕೊಡುವ ಏಕೈಕ ಕ್ಷೇತ್ರ ಪತ್ರಿಕೋದ್ಯಮ, ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದೆ ಎಂದು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಿಗಿ ಹೇಳಿದರು.
ಸ್ಥಳೀಯ ಕೆಎಲ್‌ಇ ಸೊಸೈಟಿಯ ಎಸಸಿಪಿ ಕಲಾ ಮತ್ತು ವಿಜ್ಞಾನ ಹಾಗೂ ಡಿಡಿ ಶಿರೋಳ ಕಾಮರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮ: ಸಾಮಾಜಿಕ ಜವಾಬ್ದಾರಿ, ನೈತಿಕತೆ, ಉದಯೋನ್ಮುಖ ಅವಕಾಶಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದವರು ಪತ್ರಕರ್ತ ಧೈರ್ಯವಂತ ಮತ್ತು ಗುಣವಂತನಾಗಿರಬೇಕು, ಕಾನೂನಿನ ಅರಿವಿರಬೇಕು, ದಾಖಲೆಯಿಲ್ಲದೆ ಬರೆಯಬಾರದು, ಟೀಕೆ ಮಾಡಲು ಸಿದ್ಧವಿರಬೇಕು ಆದರೆ ಟೀಕೆಯಲ್ಲಿ ದ್ವೇಷವಿರಬಾರದು ಎಂದರು.
ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿ, ಪತ್ರಕರ್ತನಿಗೆ ಅಪರಿಮಿತ ಸಾಮಾಜಿಕ ಕಳಕಳಿ ಮತ್ತು ದೇಶಾಭಿಮಾನವಿರಬೇಕು, ಪತ್ರಿಕೋದ್ಯಮ ವಿದ್ಯಾರ್ಥಿಗಳು ದೇಶದ ಹಿತಕ್ಕಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳಬೇಕು, ಸದಾ ದೇಶದ ಏಕತೆ ಜೊತೆ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುವ ಪ್ರಾಮಾಣಿಕತೆ ಇರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಎನ್.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ , ಪತ್ರಿಕೋದ್ಯಮದ ವಿಭಾಗ ಮುಖ್ಯಸ್ಥ ಎಸ್. ಐ.ಮಠಪತಿ, ಉಪನ್ಯಾಸಕ ಶಿವಲಿಂಗ ಸಿದ್ನಾಳ, ಪತ್ರಕರ್ತರಾದ ಎಸ್.ಎಸ್.ಈಶ್ವರ್ಪಗೋಳ, ಇಲಾಹಿ ಜಮಖಂಡಿ, ಹನುಮಂತ ನಾವಿ, ರಾಜೇಂದ್ರ ನಾವಿ ಇತರರಿದ್ದರು. ಶ್ರಾವಣಿ ಸೋರಗಾವಿ ಪ್ರಾರ್ಥಿಸಿ ಸಾನಿಯಾ ಸನದಿ ಸ್ವಾಗತಿಸಿ, ನಿರೂಪಿಸಿದರು.