ಬೆಳಗಾವಿ

ಹಿರಿಯ ನಾಗರಿಕರಿಗೆ ಸೈಬರ್ ಅಪರಾಧ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ

ಹಿರಿಯ ನಾಗರಿಕರಿಗೆ ಸೈಬರ್ ಅಪರಾಧ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ


ಬೆಳಗಾವಿ 09: ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹಿರಿಯ ನಾಗರಿಕರು ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಿ, ತಮ್ಮ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಿಲ್ಲಾ ಹಿರಿಯ ನ್ಯಾಯಾಧೀಶರಾದ ಶಿವಕುಮಾರ್ ಹೇಳಿದರು.

ನಗರದ ರಾಮತೀರ್ಥ ನಗರದಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ನಗರ ಸೈಬರ್ ಅಪರಾಧ  ಪೊಲೀಸ್ ಇಲಾಖೆ ಹಾಗೂ ರಾಮತೀರ್ಥ ನಗರ ಹಿರಿಯ ನಾಗರಿಕರ ಸಂಘದ ಸಹಯೋಗದಲ್ಲಿ ಆಯೋಜಿಸಲಾದ " ಸೈಬರ್ ಅಪರಾಧ ತಡೆ ಜಾಗೃತಿ " ಕಾರ್ಯಕ್ರಮವನ್ನು ಉದ್ಘಾಟಿಸಿದರು ಅವರು ಮಾತನಾಡಿದರು. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆಗಳು, ಸಂದೇಶಗಳು ಹಾಗೂ ಅನುಮಾನಾಸ್ಪದ ಲಿಂಕ್ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರಿಗೆ ಎಟಿಎಂ ಪಿನ್, ಒಟಿಪಿ, ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬಾರದು.

ಆನ್ಲೈನ್ ಹಣಕಾಸು ವ್ಯವಹಾರ ಮಾಡುವಾಗ ಜಾಗರೂಕತೆ ವಹಿಸಬೇಕು ಎಂದು ಸಲಹೆ ನೀಡಿದರು. ಬೆಳಗಾವಿ ನಗರ ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಎಸ್‌. ಮಂಟೂರ ಮಾತನಾಡಿ, ಸೈಬರ್ ವಂಚನೆಗೆ ಒಳಗಾದ ಸಂದರ್ಭದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು. ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದುವ ಮೂಲಕ ಇಂತಹ ವಂಚನೆಗಳಿಂದ ದೂರವಿರಲು ಸಾಧ್ಯವಿದೆ. ಹಿರಿಯ ನಾಗರಿಕರು ತಂತ್ರಜ್ಞಾನವನ್ನು ಸುರಕ್ಷಿತವಾಗಿ ಬಳಸುವ ಕುರಿತು ಜಾಗೃತಿ ಹೊಂದುವುದು ಅಗತ್ಯ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸೈಬರ್ ಅಪರಾಧ ವಿಭಾಗದ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಶೈಲ ಗಾಬಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎ.ವೈ. ಬೆಂಡಿಗೇರಿ, ರಾಷ್ಟ್ರೀಯ ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಮಾಜಿ ಮಹಾಪೌರ ಎನ್‌.ಬಿ. ನಿರ್ವಾಣಿ, ಸಮಾಜ ಸುಧಾರಕ ಸುರೇಶ ಯಾದವ, ರಾಮತೀರ್ಥ ನಗರ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಂ.ಎ. ಕೋರಿಶೆಟ್ಟಿ, ಎಸ್‌.ಜಿ. ಸಿದ್ನಾಳ, ಬಸವರಾಜ ಚಟ್ಟರ, ಸಿ.ಎಸ್‌. ಬಿಡನಾಳ, ವಿ. ಗಣಾಚಾರಿ, ಜೆ.ಬಿ. ಚರಂತಿಮಠ, ಆರ್‌.ಐ. ಮಠಪತಿ, ಬಿ. ಹಂಜಿ, ಎಸ್‌.ಐ. ಹುಲಕುಂದ ಹಾಗೂ ಬಿ.ಎನ್‌. ಮೊದಗಿ ,  ಎಸ್‌.ಕೆ. ಹಿರೇಮಠ ಸ್ವಾಗತ ಗೀತೆ ಹಾಡಿದರು. ಎಂ.ಎ. ಕೋರಿಶೆಟ್ಟಿ ಸ್ವಾಗತಿಸಿದರು. ಕೆ.ಎಸ್‌. ಅಷ್ಟಗಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ