ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ: ಆರು ಮನೆ ಕಳ್ಳತನ ಪ್ರಕರಣ ಭೇದನೆ, 26.53 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಳಗಾವಿ: ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆರು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಒಟ್ಟು ₹26,53,400 ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ದಿ. 02-10-2026ರಂದು ಹುಂಚ್ಯಾನಟ್ಟಿಯ ಸ್ವಾಮಿ ವಿವೇಕಾನಂದ ನಗರ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರ ಮನೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 331(3) ಮತ್ತು 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಪತ್ತೆಗಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ನಾಗನಗೌಡ ಕಟ್ಟಿಮನಿಗೌಡ್ರ ಅವರ ನೇತೃತ್ವದಲ್ಲಿ ಪಿಎಸ್‌ಐ ಸಂತೋಷ ದಳವಾಯಿ ಹಾಗೂ ಪೊಲೀಸ್ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿದರು. ಈ ವೇಳೆ ರೋಹನ ರೂಪೇಶ ಪಾಟೀಲ (30), ಮೂಲತಃ ಗಣೇಶಪುರದ ಕ್ರಾಂತಿನಗರ ನಿವಾಸಿ ಹಾಗೂ ಸದ್ಯ ಬೆಳಗಾವಿಯ ತಿಲಕವಾಡಿಯ ಎರಡನೇ ರೈಲ್ವೆ ಗೇಟ್ ಸಮೀಪದ ಶ್ರೀಹರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ ಆರೋಪಿಯು ಹಗಲು ಹೊತ್ತಿನಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಾ ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಜ್ಜೆ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
26.53 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ :
ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳ ವಿವರ ಹೀಗಿದೆ:
ಚಿನ್ನದ ಆಭರಣಗಳು: 161 ಗ್ರಾಂ ತೂಕದ, 23,88,400 ಮೌಲ್ಯದ ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು: ಒಂದು ಕೆ.ಜಿ. ತೂಕದ, 2,30,000 ಮೌಲ್ಯದ ಬೆಳ್ಳಿ ವಸ್ತುಗಳು, ದ್ವಿಚಕ್ರ ವಾಹನ: ಕೃತ್ಯಕ್ಕೆ ಬಳಸಿದ್ದ ಕೆಎ-22/ಇಯು-2160 ನೋಂದಣಿ ಸಂಖ್ಯೆಯ ಸ್ಕೂಟರ್, ಅಂದಾಜು ಮೌಲ್ಯ 35,000.
ಕಳ್ಳತನಕ್ಕೆ ಬಳಸಿದ ಉಪಕರಣಗಳು ಸೇರಿ ಹೀಗೆ ಒಟ್ಟಾರೆ 26,53,400 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ :
ಆರೋಪಿಯನ್ನು ಪತ್ತೆಹಚ್ಚಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ನಾಗನಗೌಡ ಕಟ್ಟಿಮನಿಗೌಡ್ರ, ಪಿಎಸ್‌ಐಗಳಾದ ಸಂತೋಷ ದಳವಾಯಿ, ಲಕ್ಷ್ಮಪ್ಪ ಜೋಡಟ್ಟಿ, ವೈ.ಡಿ. ಸರನಾಯ್ಕ ಹಾಗೂ ಸಿಬ್ಬಂದಿಗಳಾದ ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ, ಮಾರುತಿ ಕೋಟಬಾಗಿ, ಬಾಳೇಶ ಪಡನಾಡ, ಆನಂದ ಕೋಟಗಿ, ಶಿವಾನಂದ ವರ್ಚಗಲ್ಲ, ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಶಿದ ಮತ್ತು ದೀಪಕ ದೊಡ್ಡಗೋಣಿ ಅವರು ಶ್ರಮಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ ಹಾಗೂ ಡಿಸಿಪಿಗಳು ಅವರುಗಳು ಶ್ಲಾಘಿಸಿದ್ದಾರೆ.