ಶಿಗ್ಗಾವ್

27ನೇ ವಿಶ್ವ ದೃಷ್ಠಿ ದಿನಾಚರಣೆ ಕಾರ್ಯಕ್ರಮ : ವಿಶ್ರಾಂತಿ ನೀಡದೇ ಅಶಿಸ್ತಿನ ದಿನಚರಿಯಿಂದ ಕಣ್ಣುಗಳ ಆರೋಗ್ಯ ಹಾಳು

27ನೇ ವಿಶ್ವ ದೃಷ್ಠಿ ದಿನಾಚರಣೆ ಕಾರ್ಯಕ್ರಮ : ವಿಶ್ರಾಂತಿ ನೀಡದೇ ಅಶಿಸ್ತಿನ ದಿನಚರಿಯಿಂದ ಕಣ್ಣುಗಳ ಆರೋಗ್ಯ ಹಾಳು

ಲೋಕದರ್ಶನ ವರದಿ 

        ಶಿಗ್ಗಾಂವಿ : ನಮ್ಮ ದೇಹದ ಪ್ರಮುಖ ಅಂಗವಾಗಿ ಕಣ್ಣು ಬಹಳಷ್ಟ ಮಹತ್ವವನ್ನು ಪಡೆದಿದ್ದು, ಅನಗತ್ಯವಾಗಿ ಕಣ್ಣುಗಳಿಗೆ ವಿಶ್ರಾಂತಿ ನೀಡದೇ ಅಶಿಸ್ತಿನ ದಿನಚರಿಯಿಂದ ಕಣ್ಣುಗಳ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ ಹೇಳಿದರು. 

    ಪಟ್ಟಣದ ಫೀನಿಕ್ಸ್‌ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ 27ನೇ ವಿಶ್ವ ದೃಷ್ಠಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್, ಟಿವಿ, ಕಂಪ್ಯೂಟರ, ಲ್ಯಾಪ್ಟಾಪ್ ಗಳಂತಹ ತೀಕ್ಷವಾದ ಪರದೆ ಬೆಳಕಿನಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.  

ಅವಶ್ಯಕತೆ ಮತ್ತು ಕ್ರಮಬದ್ಧವಾದ ರೀತಿಯಿಂದ ಇವುಗಳನ್ನು ಬಳಕೆ ಮಾಡಬೇಕು ಎಂದರು. 

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ಚನ್ನಬಸಪ್ಪ ವಿರಕ್ತಮಠ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ನಮ್ಮ ಯುವ ಪೀಳಿಗೆ ಆಹಾರ ಪದ್ಧತಿಯನ್ನು ಬದಲಾಯಿಸುತ್ತಿರುವುದು ಒಂದು ದುರಂತ ಸಂಗತಿಯಾಗಿದೆ. ನಮ್ಮ ಮೂಲ ಆಹಾರ ಪದ್ದತಿ ಮಾತ್ರ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ.

                 40 ವರುಷ ಮೇಲ್ಪಟ್ಟವರು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದ್ದು, ಪ್ರತಿ ವರ್ಷ ಹಾವೇರಿ ಜಿಲ್ಲೆಯಲ್ಲಿ 12,000 ಉಚಿತ ಕಣ್ಣು ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಕಣ್ಣು ದಾನ ಸರ್ವ ಶ್ರೇಷ್ಠವಾಗಿದ್ದು, ಸಾರ್ವಜನಿಕರು ಈ ನಿಟ್ಟಿನಲ್ಲಿ ಸಮಾಜಮುಖಿ ಕಾಯಕದಲ್ಲಿ ತೊಡಗಬೇಕು ಎಂದ ಅವರು, ಹಾವೇರಿ ಜಿಲ್ಲೆಯಲ್ಲಿ ಇನ್ನೂ 5000  ರಷ್ಟು ಕಣ್ಣುದಾನದ ಬೇಡಿಕೆ ಇದೆ ಎಂದರು. 

              ನಂತರ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಫೀನಿಕ್ಸ್‌ ಶಿಕ್ಷಣ ಸಂಸ್ಥೆಯ  ವತಿಯಿಂದ ಸನ್ಮಾನಿಸಲಾಯಿತು. ಫೀನಿಕ್ಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ರಾಣಿ ತೀರ್ಲಾಪುರ ಅಧ್ಯಕ್ಷತೆ ವಹಿಸಿದ್ದರು,  ಶಿಗ್ಗಾಂವಿ ಆಡಳಿತ ವೈದ್ಯಾಧಿಕಾರಿ ಡಾ.ಮಲಕಾಜಯ್ಯ, ಡಾ.ಶಿವಕುಮಾರ, ಪ್ರಾಚಾರ್ಯ ಸೌಮ್ಯ ಕಟ್ಟಿಮನಿ, ನೇತ್ರಾಧಿಕಾರಿ ವಿಕ್ರಮ್ ಸಣ್ಣಮನಿ, ಜೂನಿಯರ ರಾಜಕುಮಾರ ಖ್ಯಾತಿಯ ಅಶೋಕ ಬಸ್ತಿ, ಜಲಯೋಗಪಟು ರಾಜೂ ಪೇಟಕರ ಸೇರಿದಂತೆ ಶಿಗ್ಗಾವಿ ಸರಕಾರಿ ಆಸ್ಪತ್ರೆಯ ನೇತ್ರ ತಂತ್ರಜ್ಞರು, ಅಧಿಕಾರಿಗಳು ಇದ್ದರು. 


ಸುದ್ದಿ ಓದಿ