ಪಶ್ಚಿಮ ಪದವೀಧರ ಕ್ಷೇತ್ರ: ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲವೆಂದು ಆಕ್ರೋಶ
ಲೋಕದರ್ಶನ ವರದಿ
ಶಿಗ್ಗಾವಿ: ಪಕ್ಷಕ್ಕಾಗಿ ಸುದೀರ್ಘ ಕಾಲ ತಳಮಟ್ಟದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಹಾಗೂ ಅವಕಾಶಗಳು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಹಾಗೂ ವಕೀಲ ಸುರೇಶ ಎಸ್. ಬಿಷ್ಠನಗೌಡರ, ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.
ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕಾಗಿ ಶ್ರದ್ಧೆಯಿಂದ ದುಡಿದಿದ್ದರೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಎಸ್‌ಎಲ್ಡಿಬಿ ಬ್ಯಾಂಕ್ ನಿರ್ದೇಶಕರ ಸ್ಥಾನ ಸೇರಿದಂತೆ ವಿವಿಧ ಹಂತಗಳಲ್ಲಿ ಅವಕಾಶ ನೀಡದೆ ಹಿನ್ನಡೆ ಉಂಟುಮಾಡಲಾಗಿದೆ ಎಂದು ಆರೋಪಿಸಿದರು. ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂಬುದು ಇದರಿಂದ ಮನವರಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಪಕ್ಷದ ಹಿರಿಯ ನಾಯಕರು ಮನವೊಲಿಸಲು ಪ್ರಯತ್ನಿಸಿದರೂ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿಯುವುದಾಗಿ ಸ್ಪಷ್ಟಪಡಿಸಿದ ಅವರು, ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ತಿಳಿಸಿದರು.