ನ.1 ರಂದು ಅದ್ದೂರಿ ರಾಜ್ಯೋತ್ಸವ ಆಚರಣೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಲೋಕದರ್ಶನ ವರದಿ
ಕರ್ನಾಟಕ ರಾಜ್ಯೋತ್ಸವ-2026 ಪೂರ್ವಭಾವಿ ಸಭೆ
ಬೆಳಗಾವಿ 08: ಪ್ರತಿ ವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಮಾದರಿ ರಾಜ್ಯೋತ್ಸವ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ(ಅ.8) ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ.1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಅಂಗೀಕರಿಸಿದ್ದು ಐತಿಹಾಸಿಕ ಕಾರ್ಯವಾಗಿದೆ. ಈ ಕಾರ್ಯಕ್ಕೆ ಹೋರಾಡಿದ ಕನ್ನಡಪರ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಪೂರ್ಣ ಮಹಾಜನ ವರದಿಯನ್ನು ಅಳವಡಿಸಿಕೊಂಡು ಅಂಗೀಕಾರವಾದ ಈ ಠರಾವು ಮುಂದಿನ ಕಾನೂನು ಹೋರಾಟಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂದರು.
ಪ್ರತಿ ವರ್ಷ ಬೆಳಗಾವಿ ರಾಜ್ಯೋತ್ಸವಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಬೆಳಗಾವಿಯ ರಾಜ್ಯೋತ್ಸವದ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಲು ಹಾಗೂ ಸಾರ್ವಜನಿಕರಿಗೆ ಕುಳಿತು ವೀಕ್ಷಿಸಲು ಅನುಕೂಲವಾಗುವ ಉದ್ದೇಶದೊಂದಿಗೆ ಈ ಬಾರಿ ಮೆರವಣಿಗೆಯ ಮಾರ್ಗ ಬದಲಾವಣೆ ಮಾಡಲು ಚಿಂತಿಸಲಾಗಿದ್ದು ಈ ಕುರಿತು ವಿವಿಧ ಕನ್ನಡಪರ ಸಂಘಟನೆಗಳೊಂದಿಗೆ ಚರ್ಚಿಸಿ ನಿರ್ಣಯಿಸಲಾಗುವುದು.
ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಜನರಿಗೆ ಅನುವು ಮಾಡಿಕೊಡುವಂತೆ ಹೆಚ್ಚಿನ ಸ್ಥಳಾವಕಾಶ ಒದಗಿಸಬೇಕು ಹಾಗೂ ಸುವರ್ಣ ವಿಧಾನಸೌಧದ ಎದುರಿಗೆ 108 ಅಡಿಯ ಭುವನೇಶ್ವರಿ ದೇವಿಯ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.