ಬೆಳಗಾವಿ

ಗುರ್ಲಾಪುರದಲ್ಲಿ ಲಕ್ಷ್ಮೀದೇವಿ ಜಾತ್ರೆ ಸಂಭ್ರಮ

ಗುರ್ಲಾಪುರದಲ್ಲಿ ಲಕ್ಷ್ಮೀದೇವಿ ಜಾತ್ರೆ ಸಂಭ್ರಮ

ಲೋಕದರ್ಶನ ವರದಿ 


ಗುರ್ಲಾಪುರ .8: ಗ್ರಾಮದ ಆರಾಧ್ಯದೇವತೆ  ಲಕ್ಷ್ಮೀದೇವಿ ಜಾತ್ರೆಯು ಅ.6ರಿಂದ 7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.  

ಜಾತ್ರೆಯ ಅಂಗವಾಗಿ ಐದು ವಾರಗಳ ಕಾಲ ಮಂಗಳವಾರ ಹಾಗೂ ಶುಕ್ರವಾರ ಗ್ರಾಮದಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ, ಭಕ್ತರು ಸ್ವಯಂಪ್ರೇರಿತರಾಗಿ ದೇವರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದೇವಿಗೆ ನೀರು ಹಾಕುವ ಮೂಲಕ ಗ್ರಾಮಸ್ಥರು ಹರಕೆ ತೀರಿಸಿದರು. ಬಳಿಕ ಗ್ರಾಮದ ಹಿರಿಯರು ಹಾಗೂ ಭಕ್ತರು ಮನೆ-ಮನೆಗೆ ತೆರಳಿ ಜಾತ್ರೆಯ ಸಂಪ್ರದಾಯವನ್ನು ನೆರವೇರಿಸಿದರು.  

ಮಂಗಳವಾರ ಬೆಳಗ್ಗೆ ಲಕ್ಷ್ಮೀದೇವಿಗೆ ಅಭಿಷೇಕ ನೆರವೇರಿಸಿ, ದೇವಿಯ ಉಡಿ ತುಂಬಿಸಲಾಯಿತು. ಭಕ್ತರು ದೀರ್ಘದಂಡ ನಮಸ್ಕಾರ ಹಾಗೂ ಹರಕೆಗಳನ್ನು ಸಲ್ಲಿಸಿದರು. ಸಂಜೆ ಖಾನಟ್ಟಿ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು ಭಕ್ತಿಭಾವದಿಂದ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಗ್ರಾಮದ ಎಲ್ಲ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ರಾತ್ರಿ 10 ಗಂಟೆಗೆ ಲಕ್ಷ್ಮೀದೇವಿ ಆವರಣದಲ್ಲಿ ಡೊಳ್ಳಿನ ಪದ್ಧತಿ ನೆರವೇರಿತು.  

ಬುಧವಾರ ಬೆಳಗ್ಗೆ 9 ಗಂಟೆಗೆ ಸಮಸ್ತ ದೇವರುಗಳ ಪಲ್ಲಕ್ಕಿ ಉತ್ಸವವು ಹೂವು ಹಾಗೂ ಬಂಡಾರ ಹಾರಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿವಿಧ ವಾದ್ಯಮೇಳಗಳೊಂದಿಗೆ ಡೊಳ್ಳು ಬಾರಿಸುತ್ತಾ ಬಸವೇಶ್ವರ ದೇವಸ್ಥಾನ ತಲುಪಿದ ಭಕ್ತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ನೀಲಕಂಠದ ಬೆಲ್ಲ ಪ್ರಸಾದ ವಿತರಿಸಲಾಯಿತು.  

ಪಲ್ಲಕ್ಕಿ ಉತ್ಸವದ ಬಳಿಕ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಮಹಾಪ್ರಸಾದ ವಿತರಿಸಲಾಯಿತು. ಎರಡು ದಿನಗಳ ಕಾಲ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದ ಗ್ರಾಮದ ಯುವಕ ಶಿವಬಸು ಪಾವಡೆಪ್ಪ ನೇಮಗೌಡ ಅವರನ್ನು ಗ್ರಾಮಸ್ಥರು ಹಾಗೂ ಯುವಕ ಮಂಡಳದವರು ಸತ್ಕರಿಸಿ ಅಭಿನಂದಿಸಿದರು.  

ಸಂಜೆ 5 ಗಂಟೆಗೆ ಖಾನಟ್ಟಿ ಶಿವಲಿಂಗೇಶ್ವರ ಪಲ್ಲಕ್ಕಿಗೆ ಸಕಲ ವಾದ್ಯಮೇಳಗಳೊಂದಿಗೆ ಬೀಳ್ಕೊಡಲಾಯಿತು. ಜಾತ್ರೆಯ ಪ್ರಯುಕ್ತ ಕಬಡ್ಡಿ ಪಂದ್ಯಾವಳಿ, ಟಗರು ಕಾಳಗ, ಎತ್ತಿನ ಬಂಡಿ ಸ್ಪರ್ಧೆ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು. 


ಸುದ್ದಿ ಓದಿ