ಜಿಲ್ಲಾ ಕ್ರಿಕೆಟ್ ತಂಡದಲ್ಲಿ ಚಿಂಚಲಿ ಶಾಲೆಯ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ, ರಾಜ್ಯ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಮಹಾಲಿಂಗಪುರ 08 : ಬೆಳಗಾವಿ ವಿಭಾಗ ಮಟ್ಟದ 14 ವಯೋಮಿತಿ ಒಳಗಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯನ್ನು ಪ್ರತಿನಿಧಿಸಿದ ಸ್ಥಳೀಯ ಸಿ.ಕೆ.ಚಿಂಚಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಂತಿಮ ಹನ್ನೊಂದು ಆಟಗಾರರನ್ನೊಳಗೊಂಡ ತಂಡ ಬೆಳಗಾವಿ ಜಿಲ್ಲಾ ತಂಡವನ್ನು ಪರಾಭವಗೊಳಿಸಿ ರಾಜ್ಯ ಮಟ್ಟಕ್ಕೆ ಬಡ್ತಿ ಪಡೆಯಿತು ಎಂದು ಮಹಾಂತೇಶ ಚಿಂಚಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 5 ಹಾಗೂ 6 ರಂದು ಎರಡು ದಿನಗಳ ಕಾಲ ವಿಜಯಪುರದ ಸೈನಿಕ ಪೆರೆಡ್ ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಾರ್ಯಾಲಯ ಮತ್ತು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಜಯಪುರ ಸಹಯೋಗದಲ್ಲಿ 2026-27 ನೇ ಸಾಲಿನ ಶಾಲಾ ಕ್ರಿಕೆಟ್ ಇದಾಗಿತ್ತು. ಪಂದ್ಯಾವಳಿಯಲ್ಲಿ ಒಟ್ಟು 7 ಜಿಲ್ಲಾ ತಂಡಗಳು ಭಾಗವಹಿಸಿದ್ದವು.ಧಾರವಾಡ, ಹಾವೇರಿ, ಗದಗ, ಬಾಗಲಕೋಟ, ವಿಜಯಪುರ, ಬೆಳಗಾವಿ ಮತ್ತು ಚಿಕ್ಕೋಡಿ ತಂಡಗಳು ಭಾಗವಹಿಸಿದ್ದವು.
ಅಂತಿಮ ಪಂದ್ಯದಲ್ಲಿ ಬಾಗಲಕೋಟ ಜಿಲ್ಲಾ ತಂಡ 6 ಓವರ್ ಗಳಲ್ಲಿ 2 ಹುದ್ದರಿಗಳನ್ನು ಕಳೆದುಕ್ಕೊಂಡು 68 ಓಟಗಳನ್ನು ಗಳಿಸಿತು.ಇದಕ್ಕುತ್ತರವಾಗಿ ಬೆಳಗಾವಿ ಜಿಲ್ಲೆಯ ತಂಡ 3 ಹುದ್ದರಿಗಳಿಗೆ ಕೇವಲ 26 ಓಟಗಳನ್ನು ಗಳಿಸಿ ಪ್ರತಿರೋಧ ತೋರದೆ ಸೋಲು ಕಂಡಿತು.ಈ ಪಂದ್ಯದಲ್ಲಿ ಸಿದ್ಧಲಿಂಗಯ್ಯ ಮಠಪತಿ ಉತ್ತಮ ದಾಂಡಿಗ ಮತ್ತು ಶಿವಲಿಂಗ ಕೌಜಲಗಿ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದರು.
ಈ ಸಾಧನೆಗೆ ಶಾಲಾ ಅಧ್ಯಕ್ಷೆ ಮಹಾನಂದಾ ಚಿಂಚಲಿ, ಕಾರ್ಯದರ್ಶಿ ಪವನ ಚಿಂಚಲಿ, ಆಡಳಿತ ನಿರ್ದೇಶಕರಾದ ಮಹಾಂತೇಶ ಚಿಂಚಲಿ, ಸಿದ್ದಪ್ಪ ಚಿಂಚಲಿ ಮತ್ತು ಸಮಸ್ತ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ರಾಜ್ಯ ಮಟ್ಟದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಶಾಲೆ ಮತ್ತು ಜಿಲ್ಲೆಯ ಹೆಸರು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.