ಮಹಾಲಿಂಗಪುರದಲ್ಲಿ ಬಸ್ ಕೊರತೆ: ಡಿಪೋ ನಿರ್ಮಾಣಕ್ಕೆ ಆಗ್ರಹ
ಲೋಕದರ್ಶನ ವರದಿ
ಮಹಾಲಿಂಗಪುರ 5: ನಗರ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹಾಗೂ ವ್ಯಾಪಾರ-ವಹಿವಾಟು ಹೆಚ್ಚಾಗುತ್ತಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾತ್ರ ಸಮರ್ಕವಾಗಿಲ್ಲ. ಬಸ್ ಡಿಪೋ ನಿರ್ಮಾಣ ಹಾಗೂ ಹೆಚ್ಚುವರಿ ಬಸ್ಗಳಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 6ರಿಂದ 8 ಗಂಟೆ ಅವಧಿಯಲ್ಲಿ ಅಥಣಿ, ಹುಬ್ಬಳ್ಳಿ, ಹುಕ್ಕೇರಿ, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಪ್ರಮುಖ ಮಾರ್ಗಗಳಿಗೆ ಸಮರ್ಕ ಬಸ್ಗಳಿಲ್ಲ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಹಲವು ಬಾರಿ ಮನವಿ; ಫಲ ಮಾತ್ರ ಇಲ್ಲ
ಬಸ್ ಡಿಪೋ ನಿರ್ಮಾಣ ಹಾಗೂ ಬೆಳಗಾವಿ, ಅಥಣಿ ಸೇರಿದಂತೆ ಪ್ರಮುಖ ಮಾರ್ಗಗಳಿಗೆ ಬೆಳಿಗ್ಗೆ ಹೆಚ್ಚುವರಿ ಬಸ್ಗಳನ್ನು ಬಿಡುವಂತೆ ಬಾಗಲಕೋಟೆ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮೇಲಧಿಕಾರಿಗಳ ಮಟ್ಟದಲ್ಲಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಆದರೆ ಭರವಸೆಗಳು ಕಡತಗಳಲ್ಲೇ ಉಳಿಯದೆ ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಒತ್ತಾಯಿಸಿದರು.