ಡಾಂಬರು ಹಾಕಿದ ಕೆಲವೇ ದಿನಕ್ಕೆ ಕಿತ್ತುಹೋದ ರಸ್ತೆ
ಡಾಂಬರು ಹಾಕಿದ ಕೆಲವೇ ದಿನಕ್ಕೆ ಕಿತ್ತುಹೋದ ರಸ್ತೆ
ಮಹಾಲಿಂಗಪುರ 04: ಅಭಿವೃದ್ಧಿಯ ಹೆಸರಿನಲ್ಲಿ ಡಾಂಬರೀಕರಣಗೊಂಡ ಕೆಲವೇ ದಿನಗಳಲ್ಲಿ ಮುಧೋಳಹಿನಿಪ್ಪಾಣಿ ರಸ್ತೆಯ ಮಹಾಲಿಂಗಪುರ ವ್ಯಾಪ್ತಿಯ ಹಲವು ಭಾಗಗಳು ಹದಗೆಟ್ಟಿದ್ದು, ಗುಂಡಿ, ತಗ್ಗುಹಿದಿಣ್ಣೆಗಳಿಂದ ರಸ್ತೆಯೇ ಅಪಘಾತದ ಕೂಪವಾಗಿ ಮಾರ್ಪಟಟಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯ ದುಸ್ಥಿತಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಹಾಲಿಂಗಪುರದ ಮಹಾದ್ವಾರದಿಂದ ಸೈದಾಪುರ ರಸ್ತೆಯ ಮಹಾದ್ವಾರದವರೆಗೆ, ಬಸವೇಶ್ವರ ವೃತ್ತ ಹಾಗೂ ಚನ್ನಮ್ಮ ವೃತ್ತದ ಸುತ್ತಮುತ್ತ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹಲವು ಕಡೆ ಮಳೆ ನೀರು ನಿಂತು ಡಾಂಬರು ಕಿತ್ತು ಹೋಗಿದ್ದು, ಭಾರಿ ವಾಹನಗಳ ನಿರಂತರ ಸಂಚಾರದಿಂದ ರಸ್ತೆ ಕೆಳಕ್ಕೆ ಕುಸಿದಿದೆ. ಪರಿಣಾಮವಾಗಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಅದರಲ್ಲೂ ರಾತ್ರಿ ವೇಳೆ ಸಂಚರಿಸುವವರು ತೀವ್ರ ಆತಂಕ ಎದುರಿಸುವಂತಾಗಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತ, ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಅಪಾಯ ಎಂಬಂತಾಗಿದೆ ಪರಿಸ್ಥಿತಿ. ರಸ್ತೆಯ ದುಸ್ಥಿತಿಯಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವಂತಾಗಿದ್ದು, ಎದುರಿನಿಂದ ಬರುವ ವಾಹನಗಳ ನಡುವೆ ಅಪಘಾತ ಸಂಭವಿಸುವ ಆತಂಕವೂ ಹೆಚ್ಚಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರ ನಡುವೆ ಮುಂದಿನ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭವಾಗಲಿದ್ದು, ಕಬ್ಬು ಸಾಗಿಸುವ ನೂರಾರು ಟ್ರ್ಯಾಕ್ಟರ್‌ಗಳು ಇದೇ ರಸ್ತೆಯಲ್ಲಿ ಸಂಚರಿಸಲಿವೆ. ಈಗಾಗಲೇ ಇಕ್ಕಟ್ಟಾಗಿರುವ ಹಾಗೂ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾದರೆ ಸಂಚಾರ ದಟ್ಟಣೆ ಮಾತ್ರವಲ್ಲದೆ ಅಪಘಾತದ ಅಪಾಯವೂ ಮತ್ತಷ್ಟು ಹೆಚ್ಚಲಿದೆ. ರೈತರ ಟ್ರ್ಯಾಕ್ಟರ್‌ಗಳು, ಶಾಲಾಹಿಕಾಲೇಜು ವಿದ್ಯಾರ್ಥಿಗಳ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ಒಬ್ಬರ ಜೀವ ಹೋದ ನಂತರ ಎಚ್ಚೆತ್ತುಕೊಳ್ಳುವ ಬದಲು, ಅನಾಹುತಕ್ಕೂ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ, ಕೇವಲ ತೇಪೆ ಹಾಕುವ ಕೆಲಸಕ್ಕೆ ಸೀಮಿತವಾಗದೆ, ಗುಣಮಟ್ಟದ ಮರು ಡಾಂಬರೀಕರಣ ಕಾಮಗಾರಿ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಮಾಜಿ ಪುರಸಭೆ ಅಧ್ಯಕ್ಷ ಜಿ.ಎಸ್. ಗೊಂಬಿ, ಸಾಮಾಜಿಕ ಹೋರಾಟಗಾರರಾದ ರಾಘವೇಂದ್ರ ಗರಗಟ್ಟಿ, ರವಿ ಹಂದಿಗುಂದ ಸೇರಿದಂತೆ ಸ್ಥಳೀಯರು ಲೋಕೋಪಯೋಗಿ ಇಲಾಖೆ, ಮುಧೋಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಆಗ್ರಹಿಸಿ, ಮುಧೋಳಹಿಮಹಾಲಿಂಗಪುರ ರಸ್ತೆಯನ್ನು ತಕ್ಷಣ ಪರೀಶೀಲಿಸಿ, ಹದಗೆಟ್ಟಿರುವ ಸಂಪೂರ್ಣ ರಸ್ತೆಗೆ ಮರು ಡಾಂಬರೀಕರಣ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜನರ ದಿನನಿತ್ಯದ ಸಂಚಾರಕ್ಕೆ ಜೀವನಾಡಿಯಾಗಿರುವ ಈ ರಸ್ತೆಯ ದುಸ್ಥಿತಿಗೆ ಇನ್ನೆಷ್ಟು ದಿನ ಮೌನ ಅಪಘಾತ ಸಂಭವಿಸಿ ಜೀವಹಾನಿಯಾದ ಬಳಿಕ ರಸ್ತೆ ದುರಸ್ತಿ ಮಾಡುವುದಕ್ಕಿಂತ, ಇಂದೇ ರಸ್ತೆ ಸರಿಪಡಿಸಿ ಜೀವ ಉಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಮನವಿ.