ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯ
ಗುರ್ಲಾಪುರ್, ಅ.9: ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿಗೆ ಹೆಚ್ಚಿನ ಬೆಲೆ ನೀಡಬಾರದೆಂದು ಒಗ್ಗಟ್ಟಾಗಿರುವಂತೆ ಕಾಣುತ್ತಿದ್ದು, ವಿವಿಧ ರೀತಿಯಲ್ಲಿ ಗೊಂದಲ ಸೃಷ್ಟಿಸಿ ರೈತರನ್ನು ಶೋಷಿಸುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಲಕ್ಷ್ಮಣ ಸವಸುದ್ದಿ ಆರೋಪಿಸಿದರು.
ಗುಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಬೆಲೆ ಹೆಚ್ಚಾಗಿದ್ದರೂ ರೈತರಿಗೆ ಕಬ್ಬಿಗೆ ಸೂಕ್ತ ದರ ನೀಡಲು ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಒಂದು ಟನ್ ಕಬ್ಬಿಗೆ ಕನಿಷ್ಠ ?5,500 ದರ ನೀಡಬೇಕು. ಕಬ್ಬಿನಿಂದ ತಯಾರಾಗುವ ಉಪ ಉತ್ಪನ್ನಗಳಿಂದಲೂ ಕಾರ್ಖಾನೆಗಳು ಲಾಭ ಗಳಿಸುತ್ತಿವೆ. ಆದ್ದರಿಂದ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಎಂ.ಎಸ್. ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರನ್ನು ರಕ್ಷಿಸಬೇಕು. ರಾಜ್ಯ ಸರ್ಕಾರ ಎಸ್‌ಎಪಿ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದು, ಈ ಕುರಿತು ಸಚಿವರೊಂದಿಗೆ ಮಾತುಕತೆ ನಡೆದಿದೆ. ಕೇಂದ್ರದೊಂದಿಗೆ ಚರ್ಚಿಸಿದ ಬಳಿಕ ದರ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಬ್ಬಿಗೆ ?5,500 ದರ ನಿಗದಿಪಡಿಸಿದರೆ ದೇಶದ ರೈತರು ಕಾಂಗ್ರೆಸ್ ನಾಯಕರಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಶಾಸ್ತ್ರಿಜಿಯವರನ್ನು ಸ್ಮರಿಸಿಕೊಳ್ಳಲಿದ್ದಾರೆ ಎಂದರು. ರೈತರ ಪರವಾಗಿ ಬಿಜೆಪಿ ಸಂಸದರು ಧ್ವನಿ ಎತ್ತಬೇಕು. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 30 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳ ಆಡಳಿತ ಮಂಡಳಿಗಳು ರೈತರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.